ಮೈಸೂರು: ಕೋವಿಡ್ ನಂತರ ಪ್ರಾವಾಸೋದ್ಯಮ ಚೇತರಿಕೆ ಕಾಣುತ್ತಿದ್ದು, ಈ ವರ್ಷ ಅತಿ ಹೆಚ್ಚು ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ. ಸಾಂಸ್ಕೃತಿಕ ನಗರಿ ಅರಮನೆಗಳ ನಗರಿ ಸ್ವಚ್ಛ ನಗರಿ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಮೈಸೂರು ಪ್ರಾವಾಸಿ ನಗರಿಯೂ ಆಗಿದ್ದು, ಇಲ್ಲಿಗೆ ಪ್ರತಿ ವರ್ಷ ಅಂದಾಜು 35 ಲಕ್ಷ ಪ್ರವಾಸಿಗರು ದೇಶ ವಿದೇಶಗಳಿಂದ ಹಾಗೂ ಭಾರತದ ಬೇರೆ ಬೇರೆ ಭಾಗಗಳಿಂದ ಆಗಮಿಸುತ್ತಾರೆ.
ಆದರೆ 2019 ರಿಂದ 2021ರ ಕೋವಿಡ್ನ ಅಟ್ಟಹಾಸದಿಂದಾಗಿ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲ ಕಚ್ಚಿತ್ತು. ಆದರೆ, 2020-21ರಲ್ಲಿ ಮೂರನೇ ಅಲೆಯ ಭೀತಿಯ ನಡುವೆಯೂ ಚೇತರಿಕೆ ಕಂಡ ಪ್ರವಾಸೋದ್ಯಮ ಈ ವರ್ಷ (2022 ರಲ್ಲಿ) ಬಹುಪಾಲು ಚೇತರಿಕೆ ಕಂಡಿದ್ದು ಸಹಜ ಸ್ಥಿತಿಗೆ ಮರಳುತ್ತಿದೆ.
ಪ್ರವಾಸಿ ತಾಣಗಳ ವಿವರ: ಪ್ರವಾಸಿ ನಗರಿಯಲ್ಲಿ ವಿಶ್ವ ವಿಖ್ಯಾತ ಮೈಸೂರು ಅರಮನೆ ಇದ್ದು, ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಹಾಗೂ ದೇಸಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತಿ ಹೆಚ್ಚು ಪ್ರವಾಸಿಗರು ಕಳೆದ ದಸರಾ ಸಂದರ್ಭದಿಂದಲೂ ಆಗಮಿಸುತ್ತಿದ್ದು, ಪ್ರತಿ ವಾರಾಂತ್ಯಕ್ಕೆ ಹೆಚ್ಚು ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಇದರ ಜೊತೆಗೆ ವೀಕೆಂಡ್ ರಜೆ ಜೊತೆ ಶಾಲಾ ರಜೆ ಇರುವ ಕಾರಣ ಮಕ್ಕಳೊಂದಿಗೆ ಹೆಚ್ಚು ಪ್ರವಾಸಿಗರು ಅಗಮಿಸುತ್ತಿದ್ದಾರೆ ಎಂದು ಅಂಕಿ - ಅಂಶಗಳನ್ನ ಸ್ವಲ್ಪ ದಿನದಲ್ಲೇ ನೀಡಲಾಗುವುದು ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಮಣಿ ಈ ಟಿವಿ ಭಾರತ್ಗೆ ತಿಳಿಸಿದ್ದಾರೆ.
ಪ್ರಮುಖ ಪ್ರವಾಸಿ ತಾಣಗಳಾದ ದೇಶದಲ್ಲೇ ಹಳೆಯ ಮೃಗಾಲಯ ಎಂಬ ಖ್ಯಾತಿಯ ಚಾಮರಾಜೇಂದ್ರ ಮೃಗಾಲಯ, ನಾಡಿನ ಅಧಿದೇವತೆ ನೆಲೆಸಿರುವ ಚಾಮುಂಡಿ ಬೆಟ್ಟ, ಸೇಂಟ್ ಫಿಲೋಮಿನಾ ಚರ್ಚ್ ಹಾಗೂ ಕೆ.ಆರ್.ಎಸ್ ಹಿಂಭಾಗದ ಬೃಂದಾವನ ಸೇರಿದಂತೆ ಕಾಡು ಪ್ರಾಣಿಗಳನ್ನು ನೋಡಲು ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವೀಕ್ಷಿಸಲು ಕಳೆದ ಒಂಭತ್ತು ತಿಂಗಳಿನಿಂದ ಅತಿ ಹೆಚ್ಚು ಪ್ರವಾಸಿಗರು ಮೈಸೂರು ಜಿಲ್ಲೆಗೆ ಬರುತ್ತಿದ್ದಾರೆ.
ನಷ್ಟದಲ್ಲಿದ್ದ ಹೋಟೆಲ್ಗಳಿಗೆ ಚೈತನ್ಯ: ಪ್ರವಾಸಿ ನಗರಿ ಮೈಸೂರು ಪ್ರವಾಸೋದ್ಯಮವನ್ನೇ ನಂಬಿ ಬದುಕುವ ನಗರವಾಗಿದ್ದು, ನಗರದಲ್ಲಿ ಸುಮಾರು 10000 ಕ್ಕೂ ಅಧಿಕ ಹೋಟೆಲ್ ರೂಂ.ಗಳು ಇವೆ. ಇದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಂಬಿ ಲಕ್ಷಾಂತರ ಜನ ಜೀವನ ನಡೆಸುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ನಷ್ಟದಲ್ಲಿದ್ದ ಈ ಉದ್ಯಮ ಕಳೆದ ಒಂದು ವರ್ಷದಿಂದ ಮತ್ತೆ ಮೈಕೊಡವಿದೆ.
ಮುಚ್ಚಿದ್ದ ಲಾಡ್ಜ್ಗಳು ಹಾಗೂ ಹೋಟೆಲ್ಗಳು ತೆರೆಯುತ್ತಿವೆ. ಈ ವರ್ಷ ಮೈಸೂರು ನಗರಕ್ಕೆ ದೇಶದ ನಾನಾ ಭಾಗಗಳಿಂದ ವಿಮಾನಯಾನ ಸೇವೆ ಆರಂಭವಾಗಿದ್ದು, ಇದರಿಂದ ಪ್ರವಾಸೋದ್ಯಮ ಇನ್ನಷ್ಟು ಗೆಲವು ಕಾಣುತ್ತಿದೆ ಎನ್ನುತ್ತಾರೆ ಮೈಸೂರು ಜಿಲ್ಲೆಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ.
ಇದನ್ನೂ ಓದಿ: ವೀಕೆಂಡ್ ರಿಲ್ಯಾಕ್ಸೇಷನ್ಗೆ ಕೈಬೀಸಿ ಕರೆಯುತ್ತಿದೆ ಮಡಿಕೇರಿಯ ರಾಜಾಸೀಟ್..