ಮೈಸೂರು : ಜಂಬೂಸವಾರಿಗೆ ಅಭಿಮನ್ಯು ನೇತೃತ್ವದ ಗಜಪಡೆ ಸಿದ್ಧವಾಗಿದೆ. ಎಲ್ಲ ಆನೆಗಳು ಆರೋಗ್ಯವಾಗಿವೆ. ಜಂಬೂಸವಾರಿಯನ್ನು ಯಶಸ್ವಿಗೊಳಿಸುತ್ತೇವೆ ಎಂಬ ನಂಬಿಕೆಯನ್ನು ಡಿಸಿಎಫ್ ಕರಿಕಾಳನ್ ವ್ಯಕ್ತಪಡಿಸಿದರು.
ಇಂದು ಜಂಬೂಸವಾರಿಯ ಕೊನೆಯ ರಿಹರ್ಸಲ್ನಲ್ಲಿ ಭಾಗವಹಿಸಿ 'ಈಟಿವಿ ಭಾರತ'ಗೆ ಸಂದರ್ಶನ ನೀಡಿದ ಡಿಸಿಎಫ್ ಕರಿಕಾಳನ್, ಈ ಬಾರಿಯ ದಸರಾದ ಜಂಬೂಸವಾರಿಗೆ 8 ಆನೆಗಳನ್ನು ವಿವಿಧ ಶಿಬಿರಗಳಿಂದ ಕರೆದುಕೊಂಡು ಬರಲಾಯಿತು.
ಅದರಲ್ಲಿ 6 ಆನೆಗಳನ್ನು ಜಂಬೂಸವಾರಿಗೆ ಆಯ್ಕೆ ಮಾಡಲಾಗಿದೆ. ಈಗಾಗಲೇ 3 ಬಾರಿ ರಿಹರ್ಸಲ್ ನಡೆಸಲಾಗಿದೆ. ಎಲ್ಲ ಆನೆಗಳು ಆರೋಗ್ಯವಾಗಿವೆ. ಆನೆಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದರು.
ಅಂಬಾರಿಯನ್ನು ಅಭಿಮನ್ಯು ಆನೆ ಹೊರಲಿದ್ದು, ಬಲ ಹಾಗೂ ಎಡಭಾಗದಲ್ಲಿ ಕಾವೇರಿ ಹಾಗೂ ಚೈತ್ರಾ ಆನೆಗಳು ಇರಲಿವೆ. ನಿಶಾನೆ, ನೌಪತ್ ಹಾಗೂ ಶಾಲೆ ಆನೆಗಳಾಗಿ ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ಆನೆಗಳನ್ನು ಕರೆದೊಯ್ಯಲಾಗುತ್ತದೆ.
ಆನೆಗಳ ಮನಸ್ಥಿತಿ ನೋಡಿಕೊಂಡು 2 ಅಥವಾ 3 ಆನೆಗಳನ್ನು ಬಿಡಬೇಕೋ ಎಂದು ಜಂಬೂಸವಾರಿಯ ದಿನ ತೀರ್ಮಾನ ಮಾಡುತ್ತೇವೆ. ಚಿನ್ನದ ಅಂಬಾರಿಯ ಜಂಬೂಸವಾರಿಯನ್ನು ಹೊತ್ತು ಸಾಗುವ ಅಭಿಮನ್ಯು ಆರೋಗ್ಯವಾಗಿದೆ. ಜಂಬೂಸವಾರಿಯನ್ನು ಯಶಸ್ವಿಯಾಗಿ ಸಾಗಿಸುತ್ತಾನೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ನಾಳೆ ಗಜಪಡೆಗೆ ಬಣ್ಣ : ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ಅಕ್ಟೋಬರ್ 14(ನಾಳೆ)ರ ರಾತ್ರಿಯಿಂದ ಬಣ್ಣ ಹಾಕುವ ಕೆಲಸ ಆರಂಭಿಸುತ್ತೇವೆ. ಅಕ್ಟೋಬರ್ 15ರ ಜಂಬೂಸವಾರಿಯ ದಿನದ ಮಧ್ಯಾಹ್ನ 2:30ಕ್ಕೆ ಒಳ್ಳೆಯ ಸಮಯದಲ್ಲಿ ಪೂಜೆ ಸಲ್ಲಿಸಿ ಅಭಿಮನ್ಯುವಿಗೆ ನಮ್ದಾ ಗಾದಿ ಕಟ್ಟಿ ಹಾಗೂ ಇತರೆ ಆನೆಗಳಿಗೆ ವಿಶೇಷ ಆಹಾರ ನೀಡುತ್ತೇವೆ.
ಅಂದು ಸಂಜೆ 5 ರಿಂದ 5:30ಕ್ಕೆ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಅದಕ್ಕಿಂತ ಮೊದಲು ಒಂದು ಗಂಟೆ ಮುಂಚಿತವಾಗಿ ಚಿನ್ನದ ಅಂಬಾರಿಯನ್ನು ಕಟ್ಟುವ ಕೆಲಸವನ್ನು ಪ್ರಾರಂಭಿಸುತ್ತೇವೆ ಎನ್ನುತ್ತಾರೆ ಡಿಸಿಎಫ್.
ಇದನ್ನೂ ಓದಿ: ಅರಮನೆ ಮುಂಭಾಗದಲ್ಲಿ ಜಂಬೂಸವಾರಿಯ ಅಂತಿಮ ರಿಹರ್ಸಲ್ - ಗ್ರೌಂಡ್ ರಿಪೋರ್ಟ್
ಜೊತೆಗೆ ಜಂಬೂಸವಾರಿಯ ಮೆರವಣಿಗೆಯ ದಿನ ಆನೆಗಳು ವಾಕ್ ಮಾಡುವಾಗ ಪಟಾಕಿ ಸಿಡಿಸುವುದು ಅಥವಾ ಇತರೆ ಶಬ್ಧ ಮಾಡದಂತೆ ಎಚ್ಚರವಹಿಸಲಾಗಿದೆ. ಆನೆ ನಡೆಯುವ ಮೆರವಣಿಗೆಯ ಮಾರ್ಗದಲ್ಲಿ 5 ರಿಂದ 10 ಅಡಿ ಜಾಗ ಬಿಡಬೇಕೆಂದು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಲಾಗಿದೆ ಎಂದರು.
ನೌಪತ್ ಆನೆಯಾಗಿ ಗೋಪಾಲಸ್ವಾಮಿ : ಶ್ರೀರಂಗಪಟ್ಟಣದ ಒಂದು ಘಟನೆಯಿಂದ ಗೋಪಾಲಸ್ವಾಮಿ ಆನೆಯನ್ನು ಸೈಡ್‌ಲೈನ್ ಮಾಡಲು ಸಾಧ್ಯವಿಲ್ಲ. 10 ದಸರಾಗಳಲ್ಲಿ ಭಾಗವಹಿಸಿರುವ ಅನುಭವಿ ಆನೆ. ಈ ಆನೆ ಹುಲಿ ಕಾರ್ಯಾಚರಣೆಯಲ್ಲೂ ಭಾಗವಹಿಸುತ್ತಾನೆ. ಶ್ರೀರಂಗಪಟ್ಟಣದಲ್ಲಿ ಪಟಾಕಿ ಶಬ್ಧಕ್ಕೆ ಬೆಚ್ಚಿದ್ದಾನೆ. ಆದ್ರೆ, ಯಾರಿಗೂ ತೊಂದರೆಯಾಗಿಲ್ಲ.
ಹಾಗಾಗಿ, ಆತನನ್ನು ನೌಪತ್ ಆನೆಯಾಗಿ ಜಂಬೂಸವಾರಿಯಲ್ಲಿ ಬಳಸಿಕೊಳ್ಳುತ್ತೇವೆ. ಶ್ರೀರಂಗಪಟ್ಟಣದ ಒಂದು ಘಟನೆ ನಮಗೆ ಪಾಠ. ಜಂಬೂಸವಾರಿಯ ದಿನ ಆನೆಯ ಅಕ್ಕಪಕ್ಕದಲ್ಲಿ ಸ್ವಲ್ಪ ಜಾಗ ಬಿಡಬೇಕು. ಜೊತೆಗೆ ಯಾವುದೇ ಶಬ್ಧವನ್ನು ಮಾಡದಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ಜಂಬೂಸವಾರಿಗೆ ಗಜಪಡೆಯ ಸಿದ್ಧತೆಯ ಬಗ್ಗೆ ವಿವರಿಸಿದರು.