ಮೈಸೂರು: ಕೊರೊನಾ ನಡುವೆಯೂ ಪ್ರಾಣಿಗಳ ದತ್ತು ಸ್ವೀಕಾರದಿಂದ ಮೃಗಾಲಯಕ್ಕೆ ದಾಖಲೆಯ ₹ 2.90 ಕೋಟಿ ಹಣ ಸಂಗ್ರಹವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮೃಗಾಲಯಕ್ಕೆ ಕೊರೊನಾ ಸಂದರ್ಭದಲ್ಲಿ ಆರ್ಥಿಕ ನಷ್ಟ ಆಗಿದೆ. ಆದರೆ ಪ್ರಾಣಿಗಳ ಆರೈಕೆಯಲ್ಲಿ ಕೊರತೆಯಾಗಿಲ್ಲ. ನೌಕರರಿಗೆ ಧನಸಹಾಯ ಮಾಡುವಂತೆ ಮೃಗಾಲಯದ ಪ್ರಾಧಿಕಾರದ ಜೊತೆ ಸೇರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸಹಾಯ ಸಿಗುವ ಭರವಸೆ ಇದೆ ಎಂದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರಿನ ತಮ್ಮ ಕ್ಷೇತ್ರದ ದಾನಿಗಳು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಸೇರಿ ಮೃಗಾಲಯಕ್ಕೆ ₹ 2.63 ಕೋಟಿಯನ್ನು ಪ್ರಾಣಿಗಳ ದತ್ತು ಸ್ವೀಕಾರ ಅಡಿಯಲ್ಲಿ ಕೊಡಿಸಿದ್ದಾರೆ. ಇದು ಮೃಗಾಲಯದ ಇತಿಹಾಸದಲ್ಲೇ ದಾಖಲೆ ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ₹ 20 ಲಕ್ಷ ಕೊಟ್ಟಿದ್ದಾರೆ. ಒಟ್ಟು ₹2.90 ಕೋಟಿ ಸಂಗ್ರಹವಾಗಿದೆ. ಸಂಕಷ್ಟದ ಸಮಯದಲ್ಲೂ ಸ್ಪಂದಿಸಿರುವ ಜನರಿಗೆ ಧನ್ಯವಾದ ಎಂದು ಅಜಿತ್ ಕುಲಕರ್ಣಿ ಹೇಳಿದರು.