ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ನ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಇಂದು ಬೆಳಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದುಕೊಂಡರು.
ಪೂಜಾರಿಯವರು ಮಿಥುನ್ ರೈಯವರನ್ನು ದೇವರು ಒಳ್ಳೆಯದು ಮಾಡಲಿ ಎಂದು ಅಪ್ಪಿಕೊಂಡು ಆಶೀರ್ವಾದಿಸಿದರು. ನಂತರ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಕಾಂಗ್ರೆಸ್ ತುಲನೆ ಮಾಡಿ, ಸಮುದ್ರ ಮಂಥನ ಮಾಡಿದಂತೆ, ಬೆಸ್ಟ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸಿದೆ. ಇನ್ನು ಜನರ ಕೈಯಲಿದೆ. ಜನರ ಆಶೀರ್ವಾದ ಪಡೆಯಲು ಹೊರಟಿದ್ದಾರೆ. ಅವರೊಂದಿಗೆ ಮೆರವಣಿಗೆಯಲ್ಲಿ ನಾನು ಹೊರಟಿದ್ದೇನೆ. ನನಗೆ ನಿನ್ನೆ ರಾತ್ರಿ ಆ ಶಿವನೇ ಕನಸಿನಲ್ಲಿ ಬಂದು ಮಿಥುನ್ ರೈ ಖಂಡಿತಾ ಗೆಲ್ಲುತ್ತಾರೆ ಎಂದು ತಿಳಿಸಿದ್ದಾನೆ ಎಂದು ಹೇಳಿದರು.
ಇದಕ್ಕೂ ಮೊದಲು ಹಲವು ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಮೇಲೆ ಗರಂ ಆಗಿದ್ದ ಪೂಜಾರಿಯವರು ಎಲ್ಲರ ಮೇಲೂ ಟೀಕಾಪ್ರಹಾರ ಮಾಡಿದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ಗೆ ಸೋಲು ಗ್ಯಾರಂಟಿ. ಮೊದಲು ಹೋಗಿ ಗೋಕರ್ಣನಾಥ ದೇವರಲ್ಲಿ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಇಲ್ಲಿ ಮಾತ್ರ ಅಲ್ಲ ಮಸೀದಿ, ಚರ್ಚ್ನಲ್ಲಿಯೂ ಪ್ರಾರ್ಥಿಸಿ ಎಂದು ಹೇಳಿದರು.