ಸುಳ್ಯ(ದಕ್ಷಿಣ ಕನ್ನಡ): ಕರಾವಳಿಯ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ನಡುವೆ ಉಪ್ಪುಕಳ ಎಂಬಲ್ಲಿ ಕುಮಾರಧಾರ ನದಿ ಸೇರುವ ಕಿರು ನದಿಗೆ ಜನರೇ ಸೇರಿ ಅಡ್ಡಲಾಗಿ ಸುಮಾರು 25 ಮೀ.ಉದ್ದ ಮತ್ತು 1 ಮೀ. ಅಗಲದ ಮರದ ಸೇತುವೆ ಕಟ್ಟಿದ್ದರು. ನಿನ್ನೆ ರಾತ್ರಿ ಸುರಿದ ಜಡಿಮಳೆಗೆ ಈ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಇದರಿಂದ ಆಕ್ರೋಶಗೊಂಡ ನಿವಾಸಿಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸೇತುವೆ ನಿರ್ಮಾಣದ ಲಿಖಿತ ಭರವಸೆ ನೀಡದೇ ನಾವು ಪ್ರತಿಭಟನೆ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಉಪ್ಪುಕಳ ಗ್ರಾಮವು ಸುಳ್ಯ ತಾಲೂಕಿನ ಹರಿಹರಪಳ್ಳತ್ತಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ. ಈ ಪ್ರದೇಶದಲ್ಲಿ ಸುಮಾರು 24 ಮನೆಗಳಿವೆ. ಗ್ರಾಮದಲ್ಲಿ ಒಟ್ಟು 90ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಅವುಗಳಲ್ಲಿ ಸುಮಾರು 11 ಮನೆಗಳು ನದಿಯ ಇನ್ನೊಂದು ಬದಿಯಲ್ಲಿವೆ. ಸ್ಥಳೀಯರು ಈ ನದಿ ದಾಟಲು ಅಪಾಯಕಾರಿ ಮರದ ಸೇತುವೆಯನ್ನೇ ಅವಲಂಬಿಸಿದ್ದರು.
ಇದನ್ನೂ ಓದಿ: ದೇವಾಲಯಕ್ಕೆ ಬಂದಿದ್ದ ವೃದ್ಧೆ ದಿಢೀರ್ ಕಾಣೆ: ಕುಮುದ್ವತಿ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ