ಮಂಗಳೂರು: ನಗರದಲ್ಲಿ ಕಂಡು ಬಂದಿರುವ ವಿವಾದಿತ ಗೋಡೆ ಬರಹ ಕೃತ್ಯದಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಕೈವಾಡವಿದೆ. ಆದ್ದರಿಂದ ಈ ಪ್ರಕರಣವನ್ನು ಎನ್ಐಎ(ರಾಷ್ಟ್ರೀಯ ತನಿಖಾ ತಂಡ) ಮೂಲಕ ತನಿಖೆಗೆ ಒಳಪಡಿಸಬೇಕೆಂದು ರಾಜ್ಯ ಗೃಹ ಇಲಾಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರ ಮೂಲಕ ಇಂದು ವಿಶ್ವ ಹಿಂದೂ ಪರಿಷತ್ ಮನವಿ ನೀಡಿದೆ.
ಮಂಗಳೂರು ನಗರದ ಕದ್ರಿ ಖಾಸಗಿ ಕಟ್ಟಡ ಮತ್ತು ನ್ಯಾಯಾಲಯದ ಆವರಣದಲ್ಲಿನ ಗೋಡೆಗಳಲ್ಲಿ ಲಷ್ಕರ್-ಎ-ತೋಯಿಬಾ ಮತ್ತು ತಾಲಿಬಾನ್ ಉಗ್ರಗಾಮಿ ಸಂಘಟನೆಗಳನ್ನು ಬೆಂಬಲಿಸಿ ದೇಶದ್ರೋಹಿ ಬರಹಗಳನ್ನು ಬರೆದು ಉಗ್ರಗಾಮಿಗಳಿಗೆ ಬೆಂಬಲ ನೀಡಿರುವುದು ಆತಂಕಕಾರಿಯಾಗಿದೆ. ಈ ಕೃತ್ಯದಿಂದ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದು ಭಯೋತ್ಪಾದನೆ ಚಟುವಟಿಕೆಯ ಭಾಗವಾಗಿದ್ದು, ಮೇಲ್ನೋಟಕ್ಕೆ ಜಿಹಾದಿ ಮಾನಸಿಕತೆ ಇರುವವರು ಇದನ್ನು ಎಸಗಿರುವುದಾಗಿ ತಿಳಿದು ಬರುತ್ತದೆ. ಇದರ ಹಿಂದೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಕೈವಾಡವಿದೆ ಎಂದು ಸಂಶಯ ವ್ಯಕ್ತವಾಗುತ್ತಿದೆ. ಆದ್ದರಿಂದ ಪ್ರಕರಣವನ್ನು ಎನ್ಐಎ (ರಾಷ್ಟ್ರೀಯ ತನಿಖಾ ತಂಡ) ಮೂಲಕ ತನಿಖೆಗೆ ಒಳಪಡಿಸಬೇಕೆಂದು ವಿಶ್ವಹಿಂದೂ ಪರಿಷತ್ ರಾಜ್ಯ ಸರಕಾರಕ್ಕೆ ಆಗ್ರಹಿಸಿದೆ.
ಕಳೆದ ಡಿಸೆಂಬರ್ನಲ್ಲಿ ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ಪೊಲೀಸ್ ವಾಹನ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಕೊಡಲು ಪ್ರಯತ್ನಿಸಿದ ಹಲವಾರು ಮುಸ್ಲಿಂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅದರ ಹಿಂದೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಕೈವಾಡವಿತ್ತು ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ನೀಡಿತು.