ಮಂಗಳೂರು: ಪಂಪ್ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಮೇಲ್ಸೇತುವೆ ಎಂಬ ಹೆಸರಿನ ಫ್ಲೆಕ್ಸ್ ಹಾಕಿರುವುದು ಮಹಾವೀರರಿಗೆ ಮಾಡಿದ ಅವಮಾನ ಎಂದು ಶಾಸಕ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪಂಪ್ವೆಲ್ಗೆ ಹಲವು ವರ್ಷಗಳ ಹಿಂದೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾವೀರ ಸರ್ಕಲ್ ಎಂದು ಹೆಸರಿಡಲಾಗಿತ್ತು. ಬಳಿಕ ಬೃಹತ್ ಕಳಸ ನಿರ್ಮಿಸಲಾಗಿತ್ತು. ಇದೀಗ ಬೇರೆ ಹೆಸರಿಡಲು ಹೇಗೆ ಸಾಧ್ಯ ಎಂದರು.
ಈ ಮೂಲಕ ಮಹಾವೀರರಿಗೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ಲೆಕ್ಸ್ ಮುದ್ರಣ ಮಾಡಿದ ಸಂಸ್ಥೆಯನ್ನೂ ಬಂದ್ ಮಾಡಿಸಬೇಕು. ಈ ಬಗ್ಗೆ ಸಚಿವ, ಸಂಸದ, ಶಾಸಕರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು.
ಯಲಹಂಕ ಸೇತುವೆಗೆ ವೀರ ಸಾವರ್ಕರ್ ಹೆಸರಿಡುವ ವಿವಾದದ ಬಗ್ಗೆ ಮಾತನಾಡಿದ ಅವರು, ಆ ಸೇತುವೆಗೆ ಸ್ವಾಮಿ ವಿವೇಕಾನಂದ ಎಂದು ಹೆಸರಿಟ್ಟರೆ ಉತ್ತಮ ಎಂದು ಭಾವಿಸುತ್ತೇನೆ ಎಂದರು.