ಉಪ್ಪಿನಂಗಡಿ (ದಕ್ಷಿಣ ಕನ್ನಡ): ಉಪ್ಪಿನಂಗಡಿಯಲ್ಲಿ ನಡೆದ ಗಲಭೆ ಮತ್ತು ಲಾಠಿಚಾರ್ಜ್‌ಗೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಪ್ಪಿನಂಗಡಿಯಲ್ಲಿ ಡಿ.14ರ ರಾತ್ರಿ ಠಾಣೆಯ ಮುಂಭಾಗದಲ್ಲಿ ನಡೆದ ಗಲಭೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಸಂಬಂಧ 10 ಮಂದಿ ಪಿಎಫ್ಐ ಕಾರ್ಯಕರ್ತರ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳ ಬಂಧನ ಮಾಡಲಾಗಿದೆ. ಬಂಧಿತರನ್ನ ಮೊಹಮ್ಮದ್ ತಾಹೀರ್, ಸ್ನಾಧಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್ ಪೈಜಲ್, ಮೊಹಮ್ಮದ್ ಹನೀಫ್, ಎನ್ ಕಾಸಿಂ, ಮೊಹಮ್ಮದ್ ಆಸಿಫ್ ಹಾಗೂ ತುಪೈಲ್ ಮಹಮ್ಮದ್ ಕೆ. ಎಂದು ಗುರುತಿಸಲಾಗಿದೆ.
ಪ್ರತಿಭಟನೆ ಹಾಗೂ ಗಲಭೆ ವೇಳೆ ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ, ಸರಕಾರಿ ಆಸ್ತಿ ಪಾಸ್ತಿ ಹಾನಿಗೆ ಸಂಬಂಧಿಸಿದಂತೆ ಮತ್ತು ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಜೊತೆಗೆ ಮಾನಭಂಗ ಯತ್ನ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮೂವರನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಪಿಎಫ್ಐ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿರುವುದು ಗೊತ್ತಾಗಿತ್ತು.
ಇದನ್ನೂ ಓದಿರಿ: ಉಪ್ಪಿನಂಗಡಿ ಗಲಭೆ, ಲಾಠಿಚಾರ್ಜ್ ಪ್ರಕರಣ: 10 ಮಂದಿ ಪಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಪ್ರಕರಣದ ಹಿನ್ನೆಲೆ
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಸುಬ್ರಹ್ಮಣ್ಯ ಕ್ರಾಸ್ ಬಳಿ ಡಿಸೆಂಬರ್ 7ರಂದು ಸಂಜೆ ಮೀನು ಮಾರಾಟದ ಅಂಗಡಿಯಲ್ಲಿದ್ದ ಮೂವರ ಮೇಲೆ ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ತಲ್ವಾರ್ ಮತ್ತು ರಾಡ್‌ನಿಂದ ದಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.