ಮಂಗಳೂರು ( ದ.ಕನ್ನಡ): 'ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಸಚಿವ ಈಶ್ವರಪ್ಪನವರ ಹೇಳಿಕೆಯ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೇ ಆಕ್ಷೇಪವೆತ್ತಿದ್ದಾರೆ. ಆದರೆ ದ.ಕ.ಜಿಲ್ಲೆಯ ಬಿಜೆಪಿ ಮುಖಂಡರು ಈಶ್ವರಪ್ಪನವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿವುಟೋದು ನೀವೇ, ಕೂಗಿಸೋದು ನೀವೇ, ಮುಲಾಮು ಹಚ್ಚೋದು ಕೂಡಾ ನೀವೇನಾ?' ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಸದನ ನಡೆಯದೇ ಇರಲು ಬಿಜೆಪಿಯ ರಾಷ್ಟ್ರವಿರೋಧಿ ಧೋರಣೆಯೇ ಕಾರಣ. ಬಿಜೆಪಿಯವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಮೂಲಕ ಅವರ ದೇಶಭಕ್ತಿಯ ಮುಖವಾಡ ಕಳಚಿದೆ ಎಂದರು.
ನಗರದ ಲೇಡಿಗೋಷನ್ ಆಸ್ಪತ್ರೆಗೆ ರಾಣಿ ಅಬ್ಬಕ್ಕ ಎಂದು ನಾಮಕರಣ ಮಾಡುವ ಬದಲು ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಸಿಗೆ, ವೆಂಟಿಲೇಟರ್ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿ. ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ಲೇಡಿಗೋಷನ್ ಆಸ್ಪತ್ರೆಗೆ ನೂತನ ಕಟ್ಟಡ, ಹೊಸ ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಒಂದೇ ಒಂದು ವೆಂಟಿಲೇಟರ್, ಹಾಸಿಗೆ ವ್ಯವಸ್ಥೆಯನ್ನೂ ಒದಗಿಸಿಲ್ಲ. ರೋಗಿಗಳ ಸಂಖ್ಯೆ ಹೆಚ್ಚಿದ್ದು, ರೋಗಿಗಳ ಸಂಬಂಧಿಕರಿಗೆ ಹೊರಗಡೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಹೊಸ ಕಟ್ಟಡದ ಅಗತ್ಯವಿದೆ. ವೈದ್ಯರು, ದಾದಿಯರ ಸಂಖ್ಯೆಯಲ್ಲಿ ಏರಿಕೆಯಾಗಬೇಕಿದ್ದು, ಇವೆಲ್ಲವನ್ನೂ ಕಲ್ಪಿಸಿದ ಬಳಿಕ ಹೊಸ ಹೆಸರಿಡುವ ಬಗ್ಗೆ ಚಿಂತನೆ ನಡೆಸಲಿ ಎಂದು ಹೇಳಿದರು.
ಇದನ್ನೂ ಓದಿ: ಜನರಿಗೆ ಸ್ಪಂದಿಸುವವರನ್ನು ಆಯ್ಕೆ ಮಾಡಿ: ಸಿದ್ದರಾಮಯ್ಯ
ಬ್ಯಾರಿ ಭವನ ಶಿಲಾನ್ಯಾಸವಾಗುವ ಸಂದರ್ಭದಲ್ಲಿ ನಡೆದಿರುವ ಪ್ರತಿಭಟನೆ ಬಿಜೆಪಿ ಪ್ರಾಯೋಜಿತ. ಬ್ಯಾರಿ ಭವನಕ್ಕೆ ಬಿಜೆಪಿಯೇ ಸರ್ಕಾರಿ ಭೂಮಿ ಮೀಸಲಿಟ್ಟಿದೆ. ಇದೀಗ ಬಿಜೆಪಿ ಸರ್ಕಾರ ಇರುವಾಗ ಬಿಜೆಪಿಯವರೇ ಪ್ರತಿಭಟನೆ ಮಾಡಿ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.