ಮಂಗಳೂರು: ನಮ್ಮ ಪೂರ್ವಜರ ಕಾಲದ ತಿನಿಸುಗಳನ್ನು ನೆನಪಿಸುವ 'ಆಟಿ ಕೂಟ' ಕಾರ್ಯಕ್ರಮ ನಗರದ ಹೊರವಲಯದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯಲ್ಲಿ ನಡೆಯಿತು.
ಆಟಿ ಅಂದರೆ ಆಷಾಢ ಮಾಸದಲ್ಲಿ ಹಿಂದಿನ ಕಾಲದಿಂದಲೂ ತಿನ್ನಲು ಬರಗಾಲ ಜಾಸ್ತಿ. ಮನೆಯಲ್ಲಿ ಶೇಖರಿಸಿಟ್ಟ ಆಹಾರ ಪದಾರ್ಥಗಳು ಖಾಲಿಯಾಗುವ ಸಮಯವಿದು. ಈ ವೇಳೆ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಬೆಳೆದ ಕೆಸು, ಚಗಟ ಸೊಪ್ಪು, ನುಗ್ಗೆ ಸೊಪ್ಪು, ಒಂದೆಲಗ ಮುಂತಾದವುಗಳನ್ನು ತಿಂದು ನಮ್ಮ ಪೂರ್ವಜರು ತಮ್ಮ ರೋಗಗಳನ್ನು ಶಮನಗೊಳಿಸಿದರು. ತಿನ್ನಲು ಏನೂ ಇಲ್ಲದ ಸಂದರ್ಭ ಆಹಾರವಾಗಿಯೂ ಬಳಸಿಕೊಂಡರು.
ತುಳುವರ ಹಳೆಯ ಕಾಲದ ಈ ಆಹಾರ ಪದಾರ್ಥಗಳು ಇಂದು ಮರೆಯಾಗುತ್ತಿರುವ ಕಾಲದಲ್ಲಿ ಮುಂದಿನ ಪೀಳಿಗೆಯೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ಬೆಳೆಯುವ ಸೊಪ್ಪು, ಕಾಂಡ, ಬಳ್ಳಿ, ಗಡ್ಡೆಗಳಲ್ಲಿರುವ ಆಹಾರ, ಆರೋಗ್ಯ ಸತ್ವವನ್ನು 'ಆಟಿ ಕೂಟ' ಕಾರ್ಯಕ್ರಮದ ಮೂಲಕ ಅರಿಯುವಂತೆ ಮಾಡಿರುವುದು ವಿಶೇಷ.
ಕೆಸುವಿನ ತೇಟ್ಲದ ಸಾರು, ಹರಿವೆ-ಕೆಸು ಸಾಂಬಾರ್, ನುಗ್ಗೆಸೊಪ್ಪು-ಹಲಸಿನ ಬೀಜದ ಪಲ್ಯ, ಹುರುಳಿ ಸಾರು, ಚಗಟ ಸೊಪ್ಪಿನ ವಡೆ, ಉಪ್ಪಿನ ಹಲಸಿನ ಸೊಳೆ-ಕಡಲೆ ಪಲ್ಯ, ಮಾವಿನಕಾಯಿ ಚಟ್ನಿ, ಅಮಟೆ ಉಪ್ಪಿನಕಾಯಿ, ಹಲಸಿನ ಹಪ್ಪಳ, ಹಲಸಿನ ಗಾರಿಗೆ, ಮುಳ್ಳುಸೌತೆ ಪಚ್ಚಡಿ, ಕಳಲೆ-ಹೆಸರು ಕಾಳು ಗಸಿ ಇನ್ನೂ ಹಲವು ವಿಧದ ಆಟಿಯ ವಿಶೇಷ ಭೋಜನವನ್ನು ಜನರು ಮನದಣಿಯೆ ಸವಿದರು. ಒಂದಕ್ಕಿಂತ ಒಂದು ಭಿನ್ನ ರುಚಿಯೊಂದಿಗೆ ಜನರು ತಮ್ಮ ಹಳೆಯ ಕಾಲದ ಅಡುಗೆಯನ್ನು ನೆನಪಿಸುವಂತೆ ಮಾಡಿತು. ಯುವ ಜನರಿಗೆ ತಮ್ಮ ಹಿಂದಿನ ಪೀಳಿಗೆ ಯಾವ ರೀತಿಯ ಅಡುಗೆಗಳನ್ನು ಉಂಡು ಆರೋಗ್ಯವಾಗಿ ಸದೃಢರಾಗಿ ಬಾಳಿ ಬದುಕಿದ್ದರು ಎಂದು ತಿಳಿಯುವಂತಾಯಿತು.
ಈ ಸಂದರ್ಭ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ಮಾತನಾಡಿ, ಸುಮಾರು 50 ಎಕರೆ ಜಾಗದಲ್ಲಿರುವ ಸಂಸ್ಕೃತಿ ಗ್ರಾಮ ಹಾಗೂ ಗುತ್ತಿನ ಮನೆ ಪಿಲಿಕುಳ ನಿಸರ್ಗಧಾಮದ ಜನಾಕರ್ಷಣೆಯ ಕೇಂದ್ರ ಬಿಂದು. ಸುಮಾರು ಇನ್ನೂರು ವರ್ಷಗಳಾಚೆ ನಮ್ಮ ತುಳುನಾಡು ಹೇಗೆ ಇತ್ತು ಎಂದು ಇಂದಿನವರಿಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದರು.
ಆಟಿ ಕೂಟವನ್ನು ಪಿಲಿಕುಳ ನಿಸರ್ಗಧಾಮದಲ್ಲಿ ವರ್ಷಂಪ್ರತಿ ಆಚರಣೆ ಮಾಡುತ್ತಾರೆ. ಎರಡನೇಯ ಬಾರಿ ನಾನು ಇಲ್ಲಿಗೆ ಆಗಮಿಸುತ್ತಿದ್ದೇನೆ. ಹಳೆಯ ಕಾಲದಲ್ಲಿ ಏನೇನು ನಡೆಯುತ್ತಿತ್ತು ಎಂದು ತಿಳಿಯಲು ನಾವು ಇಲ್ಲಿಗೆ ಬರಲೇಬೇಕು. ಪಿಲಿಕುಳಕ್ಕೆ ಬಂದವರು ಯಾರೂ ಗುತ್ತಿನ ಮನೆಯನ್ನು ವೀಕ್ಷಿಸದೆ ಹೋಗಬಾರದು ಎಂದು ಆಟಿಕೂಟಕ್ಕೆ ಬಂದ ಕಿರಣ್ ಶೆಣೈ ಅಭಿಪ್ರಾಯಪಟ್ಟರು.