ಮಂಗಳೂರು: ಶತಕದಂಚಿನಲ್ಲಿಯೂ ಯುವಕರಿಗೆ ಸೆಡ್ಡು ಹೊಡೆಯುವಂತೆ ಟ್ರಾಫಿಕ್ ವಾರ್ಡನ್ ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದ ಜೋಸೆಫ್ ಗೊನ್ಸಾಲ್ವಿಸ್ (99) ಇಂದು ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಕೆಲವು ದಿನಗಳಿಂದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಜೋಸೆಫ್ ಗೊನ್ಸಾಲ್ವಿಸ್ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಜೋ ಗೊನ್ಸಾಲ್ವಿಸ್ ಎಂದೇ ಪ್ರಖ್ಯಾತರಾಗಿದ್ದ ಅವರು, ಮಂಗಳೂರು ನಗರದ ಫಳ್ನೀರ್ನಲ್ಲಿ ವಾಸವಾಗಿದ್ದರು.
ಬ್ರಿಟಿಷ್ ಮೂಲದ ಜೆ.ಎಲ್.ಮೋರಿಸನ್ ಕಂಪನಿಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಉದ್ಯೋಗಕ್ಕೆ ಸೇರಿದ್ದ ಜೋ, ಬಳಿಕ ಅದೇ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದರು. ಕೊನೆಗೆ, ಕಂಪನಿಯಲ್ಲಿ ಬಡ್ತಿ ಪಡೆದು ಎಕ್ಸಿಕ್ಯೂಟಿವ್ ಡೈರೆಕ್ಟರ್ ಹುದ್ದೆಗೇರಿದ್ದರು. ಆ ಸಂದರ್ಭ ಲಂಡನ್ ನಗರದಲ್ಲೇ ಜೋ ಗೊನ್ಸಾಲ್ವಿಸ್ ನೆಲೆಯಾಗಿದ್ದರು.
ನಿವೃತ್ತಿಯ ಬಳಿಕ ಶಿಕ್ಷಣ ಸಂಸ್ಥೆಗಳು ಮತ್ತು ಚಾರಿಟಿ ಸಂಸ್ಥೆಗಳಲ್ಲಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ ಅವರು ಉತ್ತರ ಅಮೆರಿಕದಲ್ಲಿ ಮಂಗಳೂರಿನ ಸಂತ ಅಲೋಸಿಯಸ್ ಅಲ್ಯುಮ್ನಿ ಅಸೋಸಿಯೇಶನ್ ಹೆಸರಲ್ಲಿ ಸಂಘಟನೆಯೊಂದರ ಸ್ಥಾಪಕರಾಗಿದ್ದರು.
ಬಳಿಕ ಮಂಗಳೂರಿಗೆ ಆಗಮಿಸಿದ ಅವರು ನಗರದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ, ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಅದರಂತೆ, 2015ರಲ್ಲಿ ಟ್ರಾಫಿಕ್ ವಾರ್ಡನ್ ಸೇವೆ ಆರಂಭಿಸಿದ್ದಲ್ಲದೆ ತಮ್ಮ 94ರ ವಯಸ್ಸಿನಲ್ಲಿ ಚೀಫ್ ವಾರ್ಡನ್ ಆಗಿ ಸೇವೆ ಆರಂಭಿಸಿದ್ದರು.
ನಿಯಮಿತವಾಗಿ ಮಾಡುತ್ತಿದ್ದ ಯೋಗದಿಂದ ದೈಹಿಕವಾಗಿ ಸದೃಢರಾಗಿದ್ದ ಜೋಸೆಫ್ ಗೊನ್ಸಾಲ್ವಿಸ್, ವಯಸ್ಸಾದವರು ಯಾವ ರೀತಿ ದೈಹಿಕ ಆರೋಗ್ಯ ಬೆಳೆಸಿಕೊಳ್ಳಬೇಕು ಎನ್ನುವ ಬಗ್ಗೆ ಆಸಕ್ತರಿಗೆ ಟಿಪ್ಸ್ ನೀಡುತ್ತಿದ್ದರು.
ಇದನ್ನೂ ಓದಿ: ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸಂತ್ರಸ್ತೆ ಸ್ಪಂದಿಸುವ ಭರವಸೆ ಇದೆ: ಸಚಿವ ಹಾಲಪ್ಪ ಆಚಾರ್