ಮಂಗಳೂರು: ಕೋವಿಡ್ ಸೋಂಕಿನ ಪರಿಸ್ಥಿಯಲ್ಲಿಯೂ ನಾವು ನಮ್ಮ ಕುಟುಂಬ ಸದಸ್ಯರಿಂದ ದೂರವಿದ್ದು, ರೋಗಿಗಳ ಸೇವೆ ಮಾಡುತ್ತಿದ್ದರೂ, ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಮಾನಹಾನಿಕರ ಹೇಳಿಕೆ ನೀಡಿರುವುದು ಅತ್ಯಂತ ಕಳವಳಕಾರಿ. ಆದ್ದರಿಂದ ನಾನು ವೈದ್ಯಕೀಯ ವೃತ್ತಿಯನ್ನು ತೊರೆದು ಕೃಷಿಯತ್ತ ತೆರಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎಂದು ಡಾ. ಜಯಪ್ರಕಾಶ್ ಅತ್ಯಂತ ಬೇಸರದಿಂದ ನುಡಿದರು.
ನಗರದ ಐಎಂಎ ಸಭಾಂಗಣದಲ್ಲಿ ಮಾತನಾಡಿದ ಅವರು, ಖತೀಜಾ ಜಾಸ್ಮಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ನಾನು 8 ಗಂಟೆಗೆ ದಿನಚರಿ ಆರಂಭಿಸಿ ಮಧ್ಯರಾತ್ರಿ 3 ಗಂಟೆಗೆ ಮನೆ ತಲುಪುತ್ತೇನೆ. ಸ್ವತಃ ಹೆಂಡತಿ ಮಕ್ಕಳೊಂದಿಗೆ ಮಾತನಾಡುವುದಿಲ್ಲ. ದಿನವೂ ರೋಗಿಗಳ ಕಡೆಯಿಂದ ಸಾಕಷ್ಟು ಕರೆಗಳು ಬರುತ್ತವೆ. ಎಲ್ಲದಕ್ಕೂ ನಾನು ಉತ್ತರಿಸುತ್ತೇನೆ. ಇಷ್ಟೆಲ್ಲಾ ಮಾಡಿಯೂ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನೋವು ತಂದಿದೆ ಎಂದರು.
ಕೋವಿಡ್ ಸೋಂಕಿತ ಗರ್ಭಿಣಿ ಖತೀಜಾ ಜಾಸ್ಮಿನ್ ಪ್ರಕರಣದ ಬಗ್ಗೆಯೂ ನಾವು ಸಾಕಷ್ಟು ಎಚ್ಚರಿಕೆ ವಹಿಸಿದ್ದೆವು. ಆಕೆಯ ಬಗ್ಗೆ ಕರೆ ಬಂದಾಗ ಮೊದಲು ಅಥೆನಾ ಆಸ್ಪತ್ರೆಯಲ್ಲಿ ಬೆಡ್ ಖಾಲಿಯಿರುವ ಬಗ್ಗೆ ಮಾಹಿತಿ ಪಡೆದು ಅಲ್ಲಿ ಆಕೆಯ ಚಿಕಿತ್ಸೆ ಕೊಡುವ ಬಗ್ಗೆ ತಯಾರಿ ನಡೆಸಿದ್ದೆ. ಆದರೆ ಆಕೆಗೆ ಕೋವಿಡ್ ಇದ್ದ ಕಾರಣ ಕೋವಿಡ್ ಸೋಂಕಿತೆಯರ ಹೆರಿಗೆ ವ್ಯವಸ್ಥೆ ಅಲ್ಲಿ ಇಲ್ಲದ ಕಾರಣ, ನಾನು ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ತಯಾರಿ ನಡೆಸಿದ್ದೆ ಎಂದರು.
ಆಸ್ಪತ್ರೆಗೆ ಬಂದಾಗ ಆಕೆಯ ಪರಿಸ್ಥಿತಿ ಬಿಗಡಾಯಿಸಿದ್ದು, ಏಳು ಇಂಜೆಕ್ಷನ್ಗಳನ್ನು ನೀಡಿ ತಾಯಿ ಮಗುವನ್ನು ಉಳಿಸುವ ಪ್ರಯತ್ನ ಮಾಡಿದ್ದೆ. ಆದಾದ ಬಳಿಕ ಆಕೆಯ ಪರಿಸ್ಥಿತಿ ಬಿಗಡಾಯಿಸಿರುವುದನ್ನು ಮನಗಂಡು ಲೇಡಿಗೋಷನ್ ಆಸ್ಪತ್ರೆಗೆ ಕೊಂಡೊಯ್ಯಲು ವ್ಯವಸ್ಥೆ ಮಾಡಿ, ನಾನೇ ಅಲ್ಲಿಗೆ ತೆರಳಿ ಅಲ್ಲಿನ ವೈದ್ಯರಿಗೆ ಚಿಕಿತ್ಸೆಯ ಬಗ್ಗೆ ಸೂಚನೆಯನ್ನು ನೀಡಿದ್ದೆ. ಇದಷ್ಟೂ ಮಾಡಿದರೂ ನನ್ನ ಬಗ್ಗೆ ಆಕೆಯ ಕುಟುಂಬಸ್ಥರು ಇಲ್ಲಸಲ್ಲದ ಆರೋಪ ಮಾಡಿ, ನನ್ನ ಕಾಲರ್ ಪಟ್ಟಿ ಹಿಡಿದು ತಳ್ಳಿದ್ದು, ಮೊಬೈಲ್ ಫೋನ್ ಕಿತ್ತುಕೊಂಡಿರುವುದು ಬೇಸರ ತಂದಿದೆ. ಇದರಿಂದ ನಾನು ವೃತ್ತಿ ತೊರೆಯುವ ಆಲೋಚನೆ ಮಾಡುತ್ತಿದ್ದೇನೆ ಎಂದು ಡಾ. ಜಯಪ್ರಕಾಶ್ ಹೇಳಿದರು.
ಡಾ.ಪ್ರಿಯಾ ಬಳ್ಳಾಲ್ ಮಾತನಾಡಿ, ನನ್ನ ಬಗ್ಗೆ ಖತೀಜಾ ಜಾಸ್ಮಿನ್ ಹಾಗೂ ಕುಟುಂಬಸ್ಥರ ಆರೋಪ ಸುಳ್ಳು. ಕೋವಿಡ್ ಇರುವ ಕಾರಣ ತಾನು ಹೆರಿಗೆ ಮಾಡುವುದನ್ನು ನಿರಾಕರಿಸಿದ್ದೆ ಎಂಬುದು ಹಾಗೂ ಬೇರೆ ಎಲ್ಲಿ ಹೋದರೂ, ತನ್ನಿಂದಾಗಿಯೇ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಆರೋಪ ನಿರಾಧಾರ. ನಾನು ಸಾಕಷ್ಟು ಕೋವಿಡ್ ಸೋಂಕಿತರ ಹೆರಿಗೆಯನ್ನು ಮಾಡಿದ್ದೇನೆ. ನಾವು ಇಂತಹ ಪರಿಸ್ಥಿತಿಯಲ್ಲಿಯೂ ಇಷ್ಟೆಲ್ಲಾ ಮಾಡಿದರೂ, ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತದೆ. ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವಂತಹ ಮಾತುಗಳು ಕೇಳಿ ಬರುತ್ತಿವೆ. ರೋಗಿಯು ನಾನು ಹೇಳಿದ ವಿಚಾರಗಳನ್ನು ಪಾಲನೆ ಮಾಡದೆ, ನನ್ನ ವಿರುದ್ಧವೇ ಹೇಳಿಕೆಯನ್ನು ನೀಡಿರುವುದು ಅರಗಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು.
ಓದಿ.. ಹೆರಿಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ ವೈದ್ಯರು: ಕ್ರಮ ಜರುಗಿಸಿ ಎಂದು ಬಾಣಂತಿ ಆಗ್ರಹ