ಮಂಗಳೂರು: ಭಯೋತ್ಪಾದಕರ ದಾಳಿ ಭೀತಿಯಿಂದ ರಕ್ಷಣೆ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರ ಇಸ್ರೇಲ್ ಮಾದರಿ ಡ್ರೋಣ್ ನಿರೋಧಕ ತಂತ್ರಜ್ಞಾನ ಅಳವಡಿಕೆಯಾಗಲಿದೆ. ಈ ಬಗ್ಗೆ ಉನ್ನತ ಮಟ್ಟದ ಮಾತುಕತೆ ನಡೆದಿದ್ದು, ಬಹುತೇಕ ಇದು ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಮಂಗಳೂರು, ಗುವಾಹಾಟಿ, ತ್ರಿವೇಂಡ್ರಮ್, ಅಹಮದಾಬಾದ್, ಲಕ್ನೋ ಹಾಗೂ ಜೈಪುರ ವಿಮಾನ ನಿಲ್ದಾಣದ ನಿರ್ವಹಣೆಯ ಹೊಣೆಯನ್ನು ಅದಾನಿ ಸಂಸ್ಥೆ ಹೊತ್ತಿದೆ. ಇದೀಗ ಇಸ್ರೇಲ್ ಮಾದರಿಯ ಭದ್ರತಾ ತಂತ್ರಜ್ಞಾನ ಅಳವಡಿಕೆಗೆ ಮೊದಲ ಬಾರಿಗೆ ಮಂಗಳೂರು ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ.
ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಡ್ರೋಣ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನಿಸುತ್ತಲೇ ಇದೆ. ಅಲ್ಲದೆ ವಿಮಾನ ನಿಲ್ದಾಣಗಳಲ್ಲಿಯೂ ವಿಧ್ವಂಸಕ ಕೃತ್ಯ ನಡೆಸುವ ಹುನ್ನಾರವನ್ನು ಭಯೋತ್ಪಾದಕರು ಮಾಡುತ್ತಿದ್ದಾರೆಂಬ ಮಾಹಿತಿ ರವಾನೆಯಾಗಿದೆ. ಆದ್ದರಿಂದ ಕೇಂದ್ರ ವಿಮಾನ ಯಾನ ಭದ್ರತಾ ಏಜೆನ್ಸಿ ಸಂಭಾವ್ಯ ಡ್ರೋಣ್ ದಾಳಿ ತಡೆಯುವ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳಲ್ಲಿ ಆ್ಯಂಟಿ ಡ್ರೋಣ್ ತಂತ್ರಜ್ಞಾನ ಅಳವಡಿಕೆಗೆ ಸೂಚನೆ ನೀಡಿದೆ.
ಈ ಬಗ್ಗೆ ಕೇಂದ್ರ ವಿಮಾನ ಯಾನ ಭದ್ರತಾ ಏಜೆನ್ಸಿ ಹಾಗೂ ವಿಮಾನ ನಿರ್ವಹಣಾ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದೆ. ಈ ಮೂಲಕ ವಿಮಾನ ನಿಲ್ದಾಣದಲ್ಲಿ ಆ್ಯಂಟಿ ಡ್ರೋಣ್ ತಂತ್ರಜ್ಞಾನ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಇಸ್ರೇಲ್ ಮಾದರಿ ಡ್ರೋಣ್ ತಂತ್ರಜ್ಞಾನ ಅಳವಡಿಸಿದ್ದಲ್ಲಿ, ಉಗ್ರರು ಯಾವುದೇ ರೀತಿಯ ವಿಧ್ವಂಸಕ ಕೃತ್ಯ ಎಸಗಲು ಸಾಧ್ಯವಿಲ್ಲ.
ವಿಮಾನ ನಿಲ್ದಾಣವನ್ನು ನಾಶಪಡಿಸುವ ಯಾವುದೇ ದಾಳಿಯು ವಾಯುಸೀಮೆ ಪ್ರವೇಶಿಸುವ ಮೊದಲೇ ನಾಶಗೊಳಿಸುವ ಸಾಮರ್ಥ್ಯ ಇಸ್ರೇಲ್ ಮಾದರಿ ಡ್ರೋಣ್ ತಂತ್ರಜ್ಞಾನಕ್ಕಿದೆ. ಆಕ್ರಮಣ ವೇಳೆ ಡ್ರೋಣ್ ಸಿಗ್ನಲ್ ತಪ್ಪಿಸುವ ಹಾಗೂ ಅಟೋಮ್ಯಾಟಿಕ್ ಗನ್ ಮೂಲಕ ಡ್ರೋಣ್ ಹೊಡೆದುರುಳಿಸುವ ತಂತ್ರಜ್ಞಾನ ಇದಕ್ಕಿದೆ ಎನ್ನಲಾಗುತ್ತಿದೆ.