ಪುತ್ತೂರು : 26 ವರ್ಷಗಳ ಹಿಂದೆ ಸಾಲ್ಮರದಲ್ಲಿ ನಿವೃತ್ತ ತಹಶೀಲ್ದಾರ್ ಲಿಂಗಪ್ಪ ಗೌಡ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಕೇರಳದ ಎರ್ನಾಕುಲಂ ನಿವಾಸಿ ಜೊಡ್‌ಸನ್ ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಆರೋಪಿ ಜೊಡ್‌ಸನ್ 1995ರಲ್ಲಿ ಪುತ್ತೂರು ಸಾಲ್ಮರದಲ್ಲಿ ನಿವೃತ್ತ ತಹಶೀಲ್ದಾರ್ ಲಿಂಗಪ್ಪ ಗೌಡ ಅವರ ಮನೆಗೆ ಹೋಗಿ ನೀರು ಕೇಳುವ ನೆಪದಲ್ಲಿ ಪತ್ನಿ ಗೀತಾ ಅವರಿಗೆ ಚೂರಿ ತೋರಿಸಿ ಕೈಯಲ್ಲಿದ್ದ ಬಂಗಾರದ ಬಳೆಗಳನ್ನು ದರೋಡೆ ಮಾಡಿದ್ದ.
ಈ ಸಂಬಂಧ ಕಬಕದಲ್ಲಿ ಅದೇ ದಿನ ಪೊಲೀಸರು ಜೊಡ್ಸನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ನಂತರ ಜಾಮೀನು ಪಡೆದ ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಆರೋಪಿ ವಿರುದ್ಧ ವಾರಂಟ್ ಜಾರಿಯಾಗಿತ್ತು.
ಈ ವಿಚಾರವಾಗಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠ ಋಷಿಕೇಶ್ ಸೋನಾವನೆ, ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರ ಮಾರ್ಗದರ್ಶನದಂತೆ, ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಗೋಪಾಲ್ ನಾಯ್ಕ್, ಎಸ್ಐಗಳಾದ ಸುತೇಶ್ ಮತ್ತು ನಸ್ರೀನ್ ತಾಜ್ ಚಟ್ಟರಕಿ ಅವರ ನಿರ್ದೇಶನದಲ್ಲಿ ಎಎಸ್ಐ ಚಂದ್ರ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಪರಮೇಶ್ವರ ಮತ್ತು ಜಗದೀಶ್ ಅವರು ಆರೋಪಿಯನ್ನು ಬಂಧಿಸಿದ್ದಾರೆ. ಸೆ.26ರಂದು ಕೇರಳದ ಎರ್ನಾಕುಲಂನ ವರುಪುರು ಪುತ್ತನ್ ಕೈತಡ್ಕಚಾಲಿ ಎಂಬಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸೆ.27ರಂದು ನಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಓದಿ: ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ಕಾಮುಕರು, ರೈಲ್ವೆ ಟ್ರ್ಯಾಕ್ ಮೇಲೆ ಎಸೆದು ಪರಾರಿ