ಮಂಗಳೂರು: ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಬಿಜೆಪಿ ಸರ್ಕಾರ ಬಿಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ದೊಡ್ಡ ಕಲ್ಲುಗಳು, ಪೆಟ್ರೋಲ್ ಬಾಂಬು ಹಾಕುವ ಮೂಲಕ ಗೂಂಡಾ ಪ್ರವೃತ್ತಿ ತೋರಿದ್ದಾರೆ. ಈ ರೀತಿ ಹಿಂದೆ ರಾಜ್ಯದಲ್ಲಿ ಯಾವತ್ತೂ ಆಗಿರಲಿಲ್ಲ. ಮುಂದೆ ಇಂಥದ್ದಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ. ಆಸ್ತಿಪಾಸ್ತಿ ನಷ್ಟ ಮಾಡಲು ಅವಕಾಶ ಕೊಡದೆ ಬಿಗಿ ಕ್ರಮ ಕೈಗೊಳ್ಳುತ್ತದೆ. ಯಾರು ಆಸ್ತಿ-ಪಾಸ್ತಿ ನಷ್ಟ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದರು.
ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಪರಿಹಾರ ಹಣ ವಾಪಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾನವೀಯತೆ ಆಧಾರದಲ್ಲಿ ಅಮಾಯಕರು ಎಂದು ಪರಿಹಾರ ಘೋಷಿಸಲಾಗಿತ್ತು. ಆದರೆ, ನಂತರ ಅವರು ಅಪರಾಧಿಗಳು ಎಂಬ ಭಾವನೆ ಬಂದಿದೆ. ಆದ ಕಾರಣ ಪರಿಹಾರ ವಾಪಸ್ ಪಡೆಯಲಾಗಿದೆ. ಈಗಾಗಲೇ ತನಿಖೆ ಕೈಗೊಂಡಿದ್ದು, ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ಗೆ ಮತ ಪಡೆಯುವುದೇ ಚಿಂತೆ. ಅದಕ್ಕಾಗಿಯೇ ಹಿಂದೂ, ಮುಸ್ಲಿಂ-ಕ್ರೈಸ್ತರ ನಡುವೆ ಒಗ್ಗಟ್ಟಿಲ್ಲದಂತೆ ಮಾಡಿದೆ. ಧರ್ಮ, ಜಾತಿಗಳನ್ನು ಒಡೆದು ಅಧಿಕಾರ ನಡೆಸಿದ ಕಾಂಗ್ರೆಸ್ಗೆ ಇನ್ನೂ ಬುದ್ದಿ ಬಂದಿಲ್ಲ. ಡಿ.ಕೆ.ಶಿವಕುಮಾರ್ ಅವರು ಏಸುಕ್ರಿಸ್ತ ಪ್ರತಿಮೆ ನಿರ್ಮಿಸುವುದಕ್ಕೆ ಬೇಜಾರಿಲ್ಲ. ಕೆಂಪೇಗೌಡ, ಆದಿಚುಂಚನಗಿರಿ ಭಕ್ತ ಎಂದು ಹೇಳುವ ಅವರು ಏಸು ಪ್ರತಿಮೆ ಘೋಷಿಸುವ ಮೊದಲು ಇವರೇಕೆ ನೆನಪಾಗಲಿಲ್ಲ ಎಂದು ಪ್ರಶ್ನಿಸಿದರು. ಏಸು ಪ್ರತಿಮೆ ಸ್ಥಾಪಿಸಿ ಲಾಭ ಪಡೆಯುವ ಯತ್ನದಲ್ಲಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರನ್ನು ಓಲೈಸಿ ಪ್ರತಿಪಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಚಾರದಲ್ಲಿ ಬೇರೆ ಜಿಲ್ಲೆಯವರು ಮಾತನಾಡಬೇಡಿ. ನಮ್ಮ ಜಿಲ್ಲೆಯನ್ನು ಬಿಟ್ಟುಬಿಡಿ ಎಂಬ ಖಾದರ್ ಹೇಳಿಕೆ ತಪ್ಪು ಎಂದರು.