ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಸರಣಿ ಹತ್ಯೆಗಳ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅದು ಯಾವುದೇ ವ್ಯಕ್ತಿ, ಸಂಘಟನೆ, ಸಿದ್ದಾಂತ ಇರಲಿ ಅವರನ್ನು ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲು ಮಂಗಳೂರಿಗೆ ಬಂದಿದ್ದ ವೇಳೆ ಮಾತನಾಡಿದ ಅವರು, ಮೂರೂ ಪ್ರಕರಣಗಳ ಅಪರಾಧಿಗಳನ್ನು ಪತ್ತೆ ಮಾಡುತ್ತೇವೆ. ಅದರಲ್ಲಿ ಯಾರು ಭಾಗಿಯಾಗಿದ್ದರೂ ಸರಿ, ಸಂಸ್ಥೆ, ವ್ಯಕ್ತಿ, ಸಿದ್ದಾಂತ ಎಂದು ನೋಡದೇ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಮಾಜದಲ್ಲಿ ಯಾರಾದರೂ ಅಪರಾಧ ನೋಡಿದವರು, ಗೊತ್ತಿದ್ದವರು, ಮಾಹಿತಿ ಇದ್ದವರು ಇರುತ್ತಾರೆ. ಮಾಹಿತಿ ಇರುವ ನಾಗರಿಕರು ಪೊಲೀಸರಿಗೆ ಮಾಹಿತಿ ಕೊಟ್ಟರೆ ಆರೋಪಿಗಳನ್ನು ಶೀಘ್ರ ಬಂಧಿಸಲು ಸಹಾಯವಾಗುತ್ತದೆ. ಮಾಹಿತಿ ಗೊತ್ತಿದ್ದು, ಕೊಡಲಿಲ್ಲವೆಂದರೆ ಅವರು ಭಾಗಿ ಎಂದು ನಿರ್ಧರಿಸಬೇಕಾಗುತ್ತದೆ ಎಂದು ಪ್ರವೀಣ್ ಸೂದ್ ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಕೊಲೆ ಪ್ರಕರಣ ಆಗಿದೆ. ಮಸೂದ್ ಪ್ರಕರಣದಲ್ಲಿ 8 ಜನರನ್ನು ಅರೆಸ್ಟ್ ಮಾಡಲಾಗಿದೆ. ಪ್ರವೀಣ್ ಪ್ರಕರಣದಲ್ಲಿ ಇಬ್ಬರು ಅರೆಸ್ಟ್ ಆಗಿದ್ದಾರೆ. ಫಾಜಿಲ್ ಪ್ರಕರಣದಲ್ಲಿ ಒಬ್ಬರು ಅರೆಸ್ಟ್ ಆಗಿದ್ದು, ಕಾರು ಸಿಕ್ಕಿದೆ. ಅವರ ಮೂಲಕ ಇತರ ಅಪರಾಧಿಗಳು ಸಿಗುತ್ತಾರೆ. ಕಮಿಷನರ್, ಐಜಿ, ಎಸ್ಪಿ, ಡಿಸಿ ಅವರ ಜೊತೆಗೆ ಚರ್ಚಿಸಿ ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ.
ಮುಖ್ಯಮಂತ್ರಿ ಈ ಬಗ್ಗೆ ನಿರ್ದೇಶನ ನೀಡಿದ್ದಾರೆ. ಗಡಿ ಪ್ರದೇಶದಲ್ಲಿ ಚೆಕ್ಕಿಂಗ್ ಜಾಸ್ತಿ ಮಾಡಲಾಗಿದೆ. ದ.ಕ ಜಿಲ್ಲೆಯಲ್ಲಿ ಪೊಲೀಸರ ಬಲ ಹೆಚ್ಚಿಸಲು ಚರ್ಚೆ ನಡೆಸಲಾಗುವುದು ಎಂದರು. ಆರೋಪಿಗಳ ಪತ್ತೆಗೆ ಸಂಬಂಧಿಸಿದಂತೆ ನಡೆಸಬೇಕಾದ ಕಾರ್ಯಾಚರಣೆ ಬಗ್ಗೆ ಚರ್ಚಿಸಲಾಗುವುದು. ಮೂರು ಪ್ರಕರಣಗಳ ತನಿಖೆ ಪ್ರಗತಿಯ ಬಗ್ಗೆ ಕಮಿಷನರ್, ಎಸ್ಪಿ ಮಾಹಿತಿ ನೀಡಿತ್ತಾರೆ ಎಂದು ಹೇಳಿದರು.
ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಕೊಲೆ: ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ