ಮಂಗಳೂರು (ದಕ್ಷಿಣ ಕನ್ನಡ): ನಗರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಯುವತಿಯರನ್ನು ಬಳಸಿಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 10 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಐಟಿಪಿ ಹಾಗೂ ಪೋಕ್ಸೊ ಕಾಯ್ದೆಯನ್ವಯ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮೂವರು ಗ್ರಾಹಕರು ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರು ಸೇರಿ ಏಳು ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಪ್ರಕರಣವೇನು?: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯೋರ್ವಳು ಈ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಕೊಂಡಿರುವುದು ಆಕೆಯ ಕಾಲೇಜಿನ ಮುಖ್ಯಸ್ಥೆಗೆ ತಿಳಿದ ಬಳಿಕ ಈ ಪ್ರಕರಣ ಬಹಿರಂಗಗೊಂಡಿತ್ತು. ಆರೋಪಿಗಳು ಈಕೆಗೆ ಬೆದರಿಕೆ, ಆಮಿಷಗಳನ್ನೊಡ್ಡಿ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡಿದ್ದಾರೆ. ಆರೋಪಿಗಳು ಈಕೆಯನ್ನು 3 ತಿಂಗಳಲ್ಲಿ ಸುಮಾರು 6 ಬಾರಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾರೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈಗಾಗಲೇ ಈಕೆಯ ಮೇಲೆ ಕೃತ್ಯ ಎಸಗಿರುವ ಪ್ರಕರಣದಲ್ಲಿ ಪೋಕ್ಸೊ ಹಾಗೂ ಐಟಿಪಿ ಆ್ಯಕ್ಟ್ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೆ ಹೆಚ್ಚುವರಿ ನಾಲ್ಕು ಪೋಕ್ಸೊ ಪ್ರಕರಣ ದಾಖಲಾಗಿದೆ. ಈವರೆಗೆ ಪ್ರಕರಣದಲ್ಲಿ ವ್ಯವಸ್ಥಿತವಾಗಿ ದಂಧೆ ನಡೆಸುತ್ತಿದ್ದ ಏಳು ಮಂದಿ ಸೇರಿ ಮೂವರು ಗ್ರಾಹಕರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಯುವತಿಯರ ರಕ್ಷಣೆ
ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ ಆರೋಪಿಗಳು ನಾಲ್ವರು ಯುವತಿಯರನ್ನು ಬಳಸಿಕೊಂಡಿದ್ದರು. ಇನ್ನೂ ಕೆಲ ಯುವತಿಯರು ಈ ದಂಧೆಯಲ್ಲಿ ಸಿಲುಕಿಕೊಂಡಿರುವ ಮಾಹಿತಿಯಿದೆ. ಇದೀಗ ಈ ಪ್ರಕರಣ ಡಿಸಿಪಿ ಹರಿರಾಂ ಶಂಕರ್ ಮೇಲುಸ್ತುವಾರಿಯಲ್ಲಿ ಸಿಸಿಬಿಗೆ ವರ್ಗಾವಣೆಯಾಗಿದೆ.