ಮಂಗಳೂರು: ಬಹುತೇಕ ಕಡೆಗಳಲ್ಲಿ ಸರ್ಕಾರಿ ಕಟ್ಟಡಗಳು ಯಾವುದೇ ನಿರ್ವಹಣೆಗಳಿಲ್ಲದೇ ಶಿಥಿಲಾವಸ್ಥೆಯಲ್ಲಿ ಇರುವುದನ್ನು ನೋಡುತ್ತಲೇ ಇರುತ್ತೇವೆ. ಆದರೆ ಇದಕ್ಕೆ ಅಪವಾದವೆಂಬಂತೆ ಮಂಗಳೂರಿನಲ್ಲೊಂದು ಸರ್ಕಾರಿ ಕಚೇರಿಯು ನೋಡುಗರ ಕಣ್ಮನ ಸೆಳೆಯುತ್ತಿದೆ.
ಹೌದು, ಬೋಳಾರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಗೋಡೆಗಳ ಮೇಲೆ ರಂಗಿನ ಚಿತ್ತಾರಗಳು ಮೂಡುತ್ತಿವೆ. ನಗರದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 11 ಮಂದಿ ಮಹಿಳಾ ಹಾಗೂ ಪುರುಷ ಚಿತ್ರಕಲಾ ಶಿಕ್ಷಕರು ಇಲ್ಲಿನ ಗೋಡೆಗಳಲ್ಲಿ ರಂಗುರಂಗಿನ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಇಲ್ಲಿನ ಗೋಡೆಗಳು, ಕಂಪೌಂಡ್ ಆವರಣಗಳಲ್ಲಿ ಪೂರ್ತಿ ಈ ಶಿಕ್ಷಕರು ತಮ್ಮ ಕೈಚಳಕದಿಂದ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.
ಇವು ಬರೀ ಚಿತ್ರಗಳಲ್ಲ, ಚಿಂತನೆಯ ಚಿತ್ತಾರಗಳು:
ಇವುಗಳು ಕೇವಲ ಆಕರ್ಷಣೆಗೆ ಬಿಡಿಸಿರುವ ಚಿತ್ರಗಳಲ್ಲ, ಚಿಂತನೆಯ ಒರೆಗೆ ಹಚ್ಚಲಿರುವ ಚಿತ್ತಾರಗಳು. ಸಾಕಷ್ಟು ವರ್ಷಗಳ ಬಳಿಕ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ(NEP)ಯನ್ನು ಜಾರಿಗೊಳಿಸಿದೆ. ಈಗಷ್ಟೇ ಜಾರಿಗೆ ಬಂದಿರುವ ಎನ್ಇಪಿಯ ಬಗ್ಗೆ ಎಲ್ಲರಿಗೂ ಇನ್ನಷ್ಟೇ ಅರಿವು ಮೂಡಬೇಕಿದೆ. ಹಾಗಾಗಿ ಇಲ್ಲಿ ಎನ್ಇಪಿಯ ಒಳಮರ್ಮವನ್ನು ಚಿತ್ರಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ.
ಜೊತೆಗೆ ಕಲಾ ಕಲಿಕೆಗೆ ಪೂರಕವಾಗಿರುವ ಚಿತ್ರಗಳು, ಶಾಲಾ ಆಟದ ಬಯಲುಗಳಲ್ಲಿ ನಡೆಯುವ ಆಟೋಟಗಳ ಆಫ್ರಿಕನ್ ಆರ್ಟ್ ಮಾದರಿಯ ಚಿತ್ರಗಳು, ಮಧುಬನಿ ಚಿತ್ರಕಲೆ, ಗಂಜೀಫಾ ಚಿತ್ರಕಲೆ, ತುಳುನಾಡಿನ ಆಚರಣೆ-ಆರಾಧನೆ ಸಾಂಸ್ಕೃತಿಕ ವೈಭವಗಳ ಚಿತ್ರಗಳು, ಹೊರರಾಜ್ಯಗಳ ನೃತ್ಯಪ್ರಕಾರಗಳ ಚಿತ್ರಗಳನ್ನು ರಚಿಸುವ ಕಾರ್ಯ ಆಗುತ್ತಿದೆ.
ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಶಿಕ್ಷಕರ ಮಸ್ತಕಗಳಿಗೂ ಜ್ಞಾನ ಚಿತ್ತಾರ:
ಸಾಮಾನ್ಯವಾಗಿ ನಗರದ ಎಲ್ಲ ಶಿಕ್ಷಕರು ಒಂದಿಲ್ಲೊಂದು ಕಾರ್ಯದ ನಿಮಿತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಲೇಬೇಕು. ಈ ಸಂದರ್ಭ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಹೊಸ ಪರಿಕಲ್ಪನೆಗಳಿಗೆ ಪೂರಕವಾಗಿ ಮೂಡಿರುವ ಇಲ್ಲಿನ ಚಿತ್ರಗಳನ್ನು ನೋಡುವ ಶಿಕ್ಷಕನೋರ್ವ ಈ ಬಗ್ಗೆ ತನ್ನೊಳಗೆ ಒಂದಷ್ಟು ಚಿಂತನೆ ಮಾಡಲು ಉತ್ಸುಕನಾಗುತ್ತಾನೆ. ಜೊತೆಗೆ ಬೋಧನೆಯ ಸಂದರ್ಭವೂ ಈ ಚಿತ್ರಗಳು ಶಿಕ್ಷಕರಿಗೆ ಸಹಕಾರಿಯಾಗುತ್ತವೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸುತ್ತಾರೆ.
ಎನ್ಇಪಿಯಲ್ಲಿನ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (Foundational Literacy and numeracy), ಡಿಜಿಟಲ್ ಸಾಕ್ಷರತೆ (Digital Literacy), ಗಣಿತ ಲೆಕ್ಕಾಚಾರದ ಚಿಂತನೆ (Computational Thinking) , ವೃತ್ತಿಪರ ಶಿಕ್ಷಣ (Vocational Education), ಅಂತರ್ಗತ ಶಿಕ್ಷಣ (Inclusive Education), ಕೌಶಲ್ಯ ಆಧಾರಿತ ಶಿಕ್ಷಣ (Skill Based Education), ಸಮಗ್ರ ಶಿಕ್ಷಣ (Integrated Education) ಮುಂತಾದವುಗಳನ್ನು ಚಿತ್ರಗಳ ಮೂಲಕ ಜನ ಸಾಮಾನ್ಯರಿಗೆ, ಶಿಕ್ಷಕರಿಗೆ ಪರಿಚಯಿಸುವ ಕಾರ್ಯವನ್ನು ಇಲ್ಲಿ ಮಾಡಲಾಗಿದೆ. ಪ್ರಸ್ತುತ ಬದಲಾವಣೆಗೊಂಡ ಶಿಕ್ಷಣದ ವಿನೂತನ ಆಯಾಮಗಳಿಗೆ ಪೂರಕವಾಗಿ ಈ ಚಿತ್ರಗಳನ್ನು ರಚಿಸಲಾಗಿದೆ. ಈ ಹೊಸ ಪರಿಕಲ್ಪನೆಯ ಶಿಕ್ಷಣದ ಬಗ್ಗೆ ಶಿಕ್ಷಕರು ಚಿಂತನೆ ನಡೆಸಿ ತಮ್ಮ ಬೋಧನೆಗಳಲ್ಲಿ ಇದನ್ನು ತೊಡಗಿಸಿಕೊಳ್ಳುವ ಕಾರ್ಯ ಆಗಬೇಕೆಂಬ ಮುಂದಾಲೋಚನೆ ಈ ಕಾರ್ಯದ ಹಿಂದೆ ಅಡಗಿದೆ.
ಒಂದು ತಿಂಗಳಿನಿಂದ ಗೋಡೆಗಳಲ್ಲಿ ಚಿತ್ರಗಳ ರಚನಾ ಕಾರ್ಯ:
ಕಳೆದ ಒಂದು ತಿಂಗಳಿನಿಂದ ಚಿತ್ರಕಲಾ ಶಿಕ್ಷಕರು ಇಲ್ಲಿನ ಗೋಡೆಗಳಲ್ಲಿ ಚಿತ್ರರಚನಾ ಕಾರ್ಯ ನಡೆಸುತ್ತಿದ್ದಾರೆ. ಮುಂದಿನ 3-4 ದಿನಗಳಲ್ಲಿ ಚಿತ್ರರಚನಾ ಕಾರ್ಯ ಸಂಪೂರ್ಣಗೊಳ್ಳಲಿದೆ. ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವದ ನೆನಪಿಗಾಗಿ ದಂಡಿಯಾತ್ರೆಯ ಚಿತ್ರವನ್ನು ಬಿಡಿಸಲಾಗುತ್ತಿದೆಯಂತೆ.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಮೇಲಿನ ಮ್ಯಾನ್ ಹ್ಯಾಂಡಲಿಂಗ್ ಭಾರತೀಯ ಸಂಸ್ಕೃತಿಗೆ ಅವಮಾನ: ಡಿಕೆಶಿ
ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಶಾಂತ್ ಕುಮಾರ್ ಕೆ.ಎಸ್ ಈ ಕುರಿತು ಮಾತನಾಡಿ, ಮುಂದಿನ ದಿನಗಳಲ್ಲಿ ಕೆಲವೊಂದು ಸರ್ಕಾರಿ ಶಾಲೆಗಳ ಗೋಡೆಗಳಲ್ಲಿಯೂ ಇದೇ ರೀತಿಯ ಚಿತ್ರಗಳನ್ನು ಬಿಡಿಸುವ ಚಿಂತನೆ ಇದೆ. ಈ ಮೂಲಕ ಹೊಸ ಶಿಕ್ಷಣದ ಪರಿಕಲ್ಪನೆಯನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಜತೆಗೆ ಸರ್ಕಾರಿ ಶಾಲೆಯತ್ತ ಮಕ್ಕಳನ್ನು ಆಕರ್ಷಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.