ಮಂಗಳೂರು: ಕೇಂದ್ರ ಸರಕಾರದ ರಫೆಲ್ ಹಗರಣ, ಸಿಎಂ ಬದಲಾವಣೆ ಆಡಿಯೋ ವೈರಲ್, ಸಚಿವೆ ಜೊಲ್ಲೆ ಅವರ ಅಂಗನವಾಡಿ ಮೊಟ್ಟೆ ಕಮಿಷನ್ ಪ್ರಕರಣ ಹೀಗೆ ತನಿಖೆಗೊಳಪಡುವ ಹಲವು ಪ್ರಕರಣಗಳಿದ್ದರೂ, ಯಾವುದನ್ನೂ ಬಿಜೆಪಿಯ ಮೊಂಡ ಸರಕಾರ ತನಿಖೆಗೊಳಪಡಿಸುತ್ತಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಕಿಡಿಕಾರಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರ ತಮ್ಮ ಏಳು ಪ್ರಕರಣಗಳನ್ನು ತನಿಖೆಗೆ ಒಳಪಡಿಸಿತ್ತು. ಈಗ ಬಿಜೆಪಿಯ ಹಗರಣ, ಭ್ರಷ್ಟಾಚಾರಗಳ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಿದರೂ, ಬಿಜೆಪಿಗರು ಕಿವಿ ಇದ್ದೂ ಕಿವುಡರಾಗಿದ್ದಾರೆ, ಬಾಯಿಯಿದ್ದೂ ಮೂಕರಾಗಿದ್ದಾರೆ. ಮನಮೋಹನ್ ಸಿಂಗ್ ಆಡಳಿತಕ್ಕಾಗಿ ಆಸೆ ಪಡಲಿಲ್ಲ. ಮೋದಿಯವರಯ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಆಡಿಯೋ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ನಳಿನ್ ಅವರದ್ದೇ ಸ್ವರ ಎಂದು ಖಚಿತತೆ ಇದೆ. ಆದರೆ, ದ.ಕ.ಜಿಲ್ಲೆಯ ಶಾಸಕರಿಗೆ 15 ವರ್ಷಗಳಿಂದ ಅಲ್ಲಿ ಸಂಸದರಾಗಿರುವ ನಳಿನ್ ಅವರ ಧ್ವನಿಯನ್ನ ಗುರುತಿಸಲು ಸಾಧ್ಯವಾಗಿಲ್ಲ ಎಂಬುದನ್ನು ನೋಡಿದರೆ ಅವರ ಬಗ್ಗೆ ಕನಿಕರ ಮೂಡುತ್ತದೆ ಎಂದು ವ್ಯಂಗ್ಯವಾಡಿದರು.
ನಳಿನ್ ಕುಮಾರ್ ವ್ಯಂಗ್ಯ ನಗುವನ್ನ ಮಿಮಿಕ್ರಿ ಮಾಡಲು ಸಾಧ್ಯವೇ
ಆಡಿಯೋ ವೈರಲ್ ವಿಚಾರದಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ನಳಿನ್ ಕುಮಾರ್ ಅವರ ವ್ಯಂಗ್ಯ ನಗುವನ್ನು ಯಾರಾದರೂ, ಮಿಮಿಕ್ರಿ ಮಾಡಲು ಸಾಧ್ಯವೇ. ಆದ್ದರಿಂದ ಬಿಜೆಪಿ ಶಾಸಕರು ಆಡಿಯೋ ತನಿಖೆ ನಡೆಸುವಂತೆ ಮಂಗಳೂರು ಕಮಿಷನರ್ಗೆ ಮನವಿ ನೀಡಿದ್ದಾರೆ. ಈ ಬಗ್ಗೆ ತನಿಖೆಯಾಗಿ ಸತ್ಯ ಹೊರಬರಲಿ ಎಂದು ರಮಾನಾಥ ರೈ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯವರು 'ಮಾತೃಪೂರ್ಣ ಯೋಜನೆ'ಯಲ್ಲಿ ಮೊಟ್ಟೆ ವಿತರಣೆ ಟೆಂಡರ್ ಹಂಚಿಕೆಯಲ್ಲಿ ಲಂಚದ ಅಮಿಷವೊಡ್ಡಿರುವ ಅಂಶ ಹೊರ ಬಿದ್ದಿರುವ ವಿಚಾರದಲ್ಲಿ ತನಿಖೆಯಾಗಲಿ. ಪೆಗಾಸಸ್ ಗೂಢಚರ್ಯೆ ಸಾಫ್ಟ್ ವೇರ್ ದುರ್ಬಳಕೆ ಆರೋಪದಲ್ಲಿ ಇಸ್ರೇಲ್ ತನಿಖೆಗೆ ಮುಂದಾದರೂ ದೇಶದಲ್ಲಿ ಇನ್ನೂ ತನಿಖೆ ನಡೆಸದಿರುವ ಬಗ್ಗೆ ರಮಾನಾಥ ರೈ ಅವರು ಕಿಡಿಕಾರಿದರು.