ಮಂಗಳೂರು: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸಿ ಇಂದು 'ಎಸ್‌ಪಿ ಆಫೀಸ್ ಚಲೋ'ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆ ಮಂಗಳೂರಿನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದರ ವಿರುದ್ಧ ಪಿಎಫ್ಐ, ಇಂದು ಮಧ್ಯಾಹ್ನ 3 ಗಂಟೆಗೆ ಎಸ್‌ಪಿ ಕಚೇರಿ ಚಲೋ ಪ್ರತಿಭಟನಾ ಕಾರ್ಯಕ್ರಮವನ್ನು ಆಯೋಜಿಸಿದೆ. ಆದರೆ, ಎಸ್‌ಪಿ ಕಚೇರಿ ಚಲೋ ಹೆಸರಿನಲ್ಲಿ ರ‍್ಯಾಲಿಗೆ ಅವಕಾಶ ನೀಡದೆ ಕೇವಲ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ನೀಡುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಎಸ್‌ಪಿ ಕಚೇರಿ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ. ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನೂರಾರು ಬ್ಯಾರಿಕೇಡ್ಗಳನ್ನು ತಂದು ಹಾಕಲಾಗಿದ್ದು, ಮಧ್ಯಾಹ್ನದ ಬಳಿಕ ರಸ್ತೆಗೆ ಅಡ್ಡಲಾಗಿ ಹಾಕಲಾಗುತ್ತದೆ.
ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಆಗಮಿಸುವ ಸಾಧ್ಯತೆ ಇರುವುದರಿಂದ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದೆ. 4 ಕೆಎಸ್ಆರ್ಪಿ, 5 ಸಿಎಆರ್ ತುಕಡಿ ಮತ್ತು ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎಸ್‌ಪಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಯಲ್ಲಿ ಗೆದ್ದು, ಸಾವಿನಲ್ಲಿ ಒಂದಾದ ಜೋಡಿ : ಹನುಮಂತ-ಶೃತಿ ದುರಂತ ಪ್ರೇಮಕಥೆ