ಮಂಗಳೂರು(ದಕ್ಷಿಣ ಕನ್ನಡ) : ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡ ಉಡುಪಿಯ ಸಿನಿ ಶೆಟ್ಟಿ ಇಂದು ತವರೂರಿಗೆ ಆಗಮಿಸಿದ್ದು, ಮಂಗಳೂರು ಏರ್ ಪೋರ್ಟ್ನಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಮೊದಲ ಬಾರಿಗೆ ಹುಟ್ಟೂರಿಗೆ ಸಿನಿ ಶೆಟ್ಟಿ ಆಗಮಿಸಿದ್ದಾರೆ. ಸಿನಿ ಶೆಟ್ಟಿಯವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಯ ಕುಟುಂಬಿಕರು ಆರತಿ ಎತ್ತಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿನಿಶೆಟ್ಟಿ ಮಿಸ್ ಇಂಡಿಯಾ ಆಗಿರುವ ಬಗ್ಗೆ ಸಂತಸವಿದೆ. ಮುಂದಕ್ಕೆ ಮಿಸ್ ವರ್ಲ್ಡ್ ಆಗುವ ಗುರಿಯನ್ನು ಇಟ್ಟುಕೊಂಡಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. ಉತ್ತಮ ಕಥೆ, ಸ್ಕ್ರಿಪ್ಟ್ ದೊರಕಿದ್ದಲ್ಲಿ ಬಾಲಿವುಡ್ನಲ್ಲಿ ನಟಿಸಲು ಸಿದ್ಧಳಿದ್ದೇನೆ. ನಾನು ವಿದ್ಯಾರ್ಥಿನಿಯಾಗಿದ್ದು, ಮೊದಲು ನನ್ನ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮುಗಿಸಬೇಕು. ಫೆಮಿನಾ ಮಿಸ್ ಇಂಡಿಯಾ ಒಂದು ಬಹುದೊಡ್ಡ ಪ್ರಯಾಣವಾಗಿದೆ. ಇದು ನನಗೆ ಜೀವನದಲ್ಲಿ ಭರವಸೆ ಹಾಗೂ ವಿಶ್ವಾಸವನ್ನು ದೊರಕಿಸಿಕೊಟ್ಟಿದೆ ಎಂದರು.
ನನ್ನ ಹೆತ್ತವರ ಊರು ಉಡುಪಿಯಾಗಿದ್ದು, ನನ್ನ ರಜಾದಿನಗಳನ್ನು ಉಡುಪಿಯ ಅಜ್ಜಿ ಮನೆಯಲ್ಲಿ ಕಳೆದಿದ್ದೆ. ಇದೀಗ ಮತ್ತೆ ಅಲ್ಲಿಗೆ ಬರುತ್ತಿರುವುದರಿಂದ ಸಂತಸಗೊಂಡಿದ್ದೇನೆ. ಸದ್ಯ ಮಾಡೆಲ್ ಆಗುವ ಉದ್ದೇಶವನ್ನು ಹೊಂದಿಲ್ಲ. ಐದು ವರ್ಷಗಳ ಕಾಲ ಫೈನಾನ್ಸಿಯಲ್ ಕ್ಷೇತ್ರದಲ್ಲಿ ದುಡಿಯುವ ಆಸಕ್ತಿಯಿದ್ದು, ಆ ಬಳಿಕ ಒಳ್ಳೆಯ ಅವಕಾಶ ಸಿಕ್ಕಲ್ಲಿ ಮಾಡೆಲ್ ಆಗುವ ಬಗ್ಗೆ ಯೋಚಿಸುತ್ತೇನೆ ಎಂದರು.
ಈ ಸಂದರ್ಭ ಸಿನಿ ಶೆಟ್ಟಿ ಅಪ್ಪಟ ತುಳುವಿನಲ್ಲಿ ಮಾತನಾಡಿ, ನನ್ನನ್ನು ಈ ರೀತಿಯಲ್ಲಿ ಎಲ್ಲರೂ ಸ್ವಾಗತ ಮಾಡಿರುವುದು ಬಹಳ ಖುಷಿ ತಂದಿದೆ. ಮುಂದಕ್ಕೆ ನಾನು ಮಿಸ್ ವರ್ಲ್ಡ್ಗೆ ತಯಾರಿ ನಡೆಸುತ್ತಿದ್ದು, ಹಾಗಾಗಿ ನನಗೆ ಎಲ್ಲರ ಆಶೀರ್ವಾದ ಬೇಕು ಎಂದರು.
ಇದನ್ನೂ ಓದಿ: ಮೈದುಂಬಿ ಹರಿಯುತ್ತಿರುವ ಕಬಿನಿಯ ವಿಹಂಗಮ ನೋಟ