ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂ, ಹಣ್ಣು-ತರಕಾರಿ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದ್ದು, ಬೆಲೆ ಏರಿಕೆ ನಡುವೆಯೂ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ತಯಾರಿ ಬಿರುಸಾಗಿದ್ದು, ಹೂ, ಹಣ್ಣು ವ್ಯಾಪಾರಸ್ಥರು ಬಿಡುವಿಲ್ಲದ ವ್ಯಾಪಾರದಲ್ಲಿ ತೊಡಗಿದ್ದಾರೆ.
ಹಾಸನ, ತುಮಕೂರು, ಹಾವೇರಿ, ಬೆಂಗಳೂರು ಸೇರಿದಂತೆ ಹಲವೆಡೆಯಿಂದ 150ಕ್ಕೂ ಅಧಿಕ ಹೂವಿನ ವ್ಯಾಪಾರಿಗಳು ಆಗಮಿಸಿದ್ದಾರೆ. ಮಾರುಕಟ್ಟೆಯಲ್ಲಿ ಸೇವಂತಿಗೆ, ಜೀನಿಯಾ, ಕಾಕಡ, ಗುಲಾಬಿ, ಮಲ್ಲಿಗೆಗೆ ಬೇಡಿಕೆ ಹೆಚ್ಚಾಗಿದ್ದು, ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.
ಸೇವಂತಿ ಒಂದು ಮೊಳ ₹ 60, 50, 40, ರೂಬಿ ಗುಲಾಬಿ, ಕಾಕಡ ಒಂದು ಮೊಳ ₹ 60 ಇದೆ. ಅಲ್ಲದೆ, ಮಂಗಳೂರಿನ ಅಷ್ಟಮಿಯ ಪಾಕಕ್ಕೆ ಬೇಕಾದ ಬೆಂಡೆ ಕಾಯಿ, ಹರಿವೆ ದಂಟು, ಕೆಸುವಿನ ದಂಟು, ಮುಳ್ಳು ಸೌತೆಗಳ ದರವೂ ಗಗನಕ್ಕೇರಿದೆ.
ಪುರಭವನದ ಎದುರುಗಡೆ ಹಾಗೂ ಹಿಂಭಾಗದ ಮತ್ತು ಮಿನಿ ವಿಧಾನಸೌಧದ ಮುಂಭಾಗದ ಫುಟ್ಪಾತ್ನಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ನಗರ ಸಂಚಾರ ಪೊಲೀಸರು ಫುಟ್ಪಾತ್ ಸ್ಥಳವನ್ನು ಬಿಟ್ಟು ಬೇರೆ ಕಡೆ ವ್ಯಾಪಾರ ನಡೆಸುವಂತೆ ವ್ಯಾಪಾರಿಗಳಿಗೆ ಸೂಚಿಸಿದ್ದಾರೆ.