ಮಂಗಳೂರು: ದೇವಸ್ಥಾನ ಧ್ವಂಸ ಪ್ರಕರಣ ವಿರೋಧಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಗಾಂಧಿಯನ್ನು ಬಿಡಲಿಲ್ಲ, ನಿಮ್ಮನ್ನು ಬಿಡುತ್ತೇವಾ ಎಂದು ಮಾತಿನ ಮಧ್ಯೆ ನೀಡಿರುವ ಹೇಳಿಕೆ ನೀಡಿದ್ದರು. ಆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗದವರ ಮೇಲೂ ಪ್ರಕರಣ ದಾಖಲಿಸಿ ಹಿಂದೂ ಮಹಾಸಭಾವನ್ನು ಮುಗಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕರಾಗಿರುವ ಧರ್ಮೇಂದ್ರ ಅವರ ಹೇಳಿಕೆ ಸಂಬಂಧ ಅವರ ಮೇಲೆ ಪ್ರಕರಣ ದಾಖಲಿಸಲಿ. ಆದರೆ ಪೊಲೀಸರು ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದವರ ಮೇಲೂ ಪ್ರಕರಣ ದಾಖಲಿಸಿದ್ದಾರೆ.
ಆ ದಿನ ಬೆಂಗಳೂರು ಪ್ರವಾಸದಲ್ಲಿದ್ದ ನನ್ನ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಈ ವಿಚಾರದಲ್ಲಿ ಬೆದರಿಕೆ ಪ್ರಕರಣ ಹಾಕಬಹುದಿತ್ತು. ಆದರೆ ಫೋರ್ಜರಿ, ಚೀಟಿಂಗ್ ಪ್ರಕರಣ ದಾಖಲಿಸಲಾಗಿದೆ. ಚುನಾವಣೆ ಆಯೋಗದಲ್ಲಿ ನೋಂದಾವಣೆಯಾಗಿರುವ ನಮ್ಮ ಪಕ್ಷವನ್ನು ನಕಲಿ ಎಂದು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ಆಕ್ರೋಶ:
2018ರಲ್ಲಿ ನನ್ನನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಿ ಬಂಧಿಸಲಾಗಿತ್ತು. ಪಕ್ಷದಿಂದ ದೂರವುಳಿದ ನನ್ನನ್ನು ಆ ಬಳಿಕ ಪಕ್ಷವು, ಆಂತರಿಕ ತನಿಖೆ ಮಾಡಿ ನಾನು ತಪಿತಸ್ಥನಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡಿದೆ. ದೇವಸ್ಥಾನ ಧ್ವಂಸ ಪ್ರಕರಣವನ್ನು ಡೈವರ್ಟ್ ಮಾಡಲು ಬಿಜೆಪಿ ನಮ್ಮ ಮೇಲೆ ಪ್ರಕರಣ ದಾಖಲಿಸಿದೆ. ಸಂಘ ಪರಿವಾರ ಬಿಟ್ಟು ಯಾರೂ ಕೂಡ ಮಾತಾಡಬಾರದು ಎಂಬುದು ಇವರ ನಿಲುವು ಎಂದು ಆರೋಪಿಸಿದರು.
ಚುನಾವಣೆಯಲ್ಲಿ ನಮ್ಮ ವಿರುದ್ಧ ಹೋರಾಡಲಿ:
ಧರ್ಮೇಂದ್ರ ಅವರ ಹೇಳಿಕೆಯ ಬಳಿಕ ನಮ್ಮನ್ನು ಬಂಧಿಸಿದ ಪೊಲೀಸರು ನಮ್ಮ ಮೇಲೆ ಮೇಲಿನಿಂದ ಒತ್ತಡ ಇದೆ ಎಂದು ಹೇಳಿದ್ದಾರೆ. ಬಿಜೆಪಿ ಹಿಂದೂ ಮಹಾಸಭಾವನ್ನು ಮುಗಿಸುವ ಕೆಲಸ ಮಾಡುತ್ತಿದೆ. ಇವರು ಚುನಾವಣೆಯಲ್ಲಿ ನಮ್ಮ ವಿರುದ್ಧ ಹೋರಾಡಲಿ. ಮುಂದೆ ನೂರಕ್ಕೆ ನೂರು ಹಿಂದೂ ಮಹಾಸಭಾ ಅಧಿಕಾರಕ್ಕೆ ಬಂದು ತಕ್ಕ ಉತ್ತರ ಕೊಡ್ತೇವೆ ಎಂದರು.
ಅಂದು ಪತ್ರಿಕಾಗೋಷ್ಠಿಯಲ್ಲಿ ಇಲ್ಲದವರ ಮೇಲೂ ಕೇಸು:
ಧರ್ಮೇಂದ್ರ ಅವರ ಹೇಳಿಕೆ ಬಗ್ಗೆ ಪಕ್ಷ ಗಮನಿಸಿದೆ. ಈ ಬಗ್ಗೆ ಅವರನ್ನು ಕರೆಸಿ ಮಾತನಾಡಿದೆ. ಈ ವಿಚಾರ ಈಗ ನ್ಯಾಯಾಲಯದಲ್ಲಿ ಇದೆ. ಪೊಲೀಸ್ ಇಲಾಖೆ ಧರ್ಮೇಂದ್ರ ಅವರ ಮೇಲೆ ಬೆದರಿಕೆ ಪ್ರಕರಣ ಹಾಕಲಿ. ಅವರು ಅದನ್ನು ಎದುರಿಸುತ್ತಾರೆ. ಅದು ಬಿಟ್ಟು ಪತ್ರಿಕಾಗೋಷ್ಠಿಯಲ್ಲಿ ಇಲ್ಲದವರ ಮೇಲೆ ಕೇಸು ಹಾಕಿರುವುದು ತಪ್ಪು ಎಂದರು.
ಚುನಾವಣಾ ಆಯೋಗವು ನಕಲಿಯೇ?
ನಮ್ಮ ನೇತೃತ್ವದ ಅಖಿಲ ಭಾರತ ಹಿಂದೂ ಮಹಾಸಭಾವನ್ನು ನಕಲಿ ಎಂದು ಹೇಳುತ್ತಿದ್ದಾರೆ. ನಮ್ಮ ಪಕ್ಷದಿಂದ ಉಚ್ಛಾಟನೆಗೊಂಡ ಎಲ್. ಕೆ. ಸುವರ್ಣ ನಮ್ಮದು ನಕಲಿ ಪಕ್ಷ ಎಂದು ಹೇಳಿದ್ದಾರೆ. ನಾವು ಚುನಾವಣಾ ಇಲಾಖೆಯ ಮಾನ್ಯತೆ ಪಡೆದಿದ್ದೇವೆ. ನಾವು ನಕಲಿಯಾಗಿದ್ದರೆ ಚುನಾವಣಾ ಆಯೋಗವು ನಕಲಿಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಆರಂಭದಲ್ಲೇ ಹಳ್ಳ ಹಿಡಿದ ನಾರಾಯಣಪುರ ಬಲದಂಡೆ ನಾಲೆ ಕಾಮಗಾರಿ: ಆತಂಕದಲ್ಲಿ ರೈತರು
ರಾಷ್ಟ್ರೀಯ ಸಮಿತಿಯಲ್ಲಿ ಆರು ಬಣಗಳಿದ್ದು, ಅದು ಅನೂರ್ಜಿತವಾಗಿದೆ. ಇದೀಗ ರಾಷ್ಟ್ರೀಯ ಸಮಿತಿ ಅಸ್ತಿತ್ವದಲ್ಲಿಲ್ಲ. ಆದುದರಿಂದ ಚುನಾವಣಾ ಆಯೋಗದ ಮಾನ್ಯತೆಯೇ ಅಧಿಕೃತ ಎಂದು ಹೇಳಿದರು.