ಪುತ್ತೂರು: ಸೂಕ್ತ ದಾಖಲೆಗಳಿಲ್ಲದೇ ಭಾರಿ ಪ್ರಮಾಣದ ಅಕ್ಕಿ ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಬಂಧಿಸಲ್ಪಟ ಇಬ್ಬರು ಆರೋಪಿಗಳಿಗೆ 24 ಗಂಟೆಯ ಒಳಗಡೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಲಾರಿ ಚಾಲಕ ಬೆಳ್ಳಾರೆ ಗ್ರಾಮ ಕಾವಿನಮೂಲೆ ಅಬ್ದುಲ್ ಖಾದರ್‌ರವರ ಪುತ್ರ ಖಲಂದರ್(31) ಹಾಗೂ ಸವಣೂರು ಗ್ರಾಮದ ಮಾಂತೂರು ಅಬ್ದುಲ್ಲಾರವರ ಪುತ್ರ ಝಕಾರಿಯಾ(40 ವ)ಗೆ ಜಾಮೀನು ದೊರೆತಿದೆ. ಆರೋಪಿಗಳ ಪರ ಪುತ್ತೂರಿನ ಖ್ಯಾತ ವಕೀಲರಾದ ನರಸಿಂಹ ಪ್ರಸಾದ್ ವಾದಿಸಿದರು.
ಪೊಲೀಸರು ಪ್ರಕರಣ ದಾಖಲಿಸಿದಂತೆ ಅದು ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯಾಗಿರಲಿಲ್ಲ. ಕಾಸರಗೋಡಿನಿಂದ ಮಂಡ್ಯಕ್ಕೆ ಅಕ್ಕಿ ಸಾಗಿಸುತ್ತಿದ್ದ ವೇಳೆ ವಾಹನ ಕೆಟ್ಟು ಹೋದ ಕಾರಣ ಬೇರೊಂದು ವಾಹನದಲ್ಲಿ ಅಕ್ಕಿ ಸಾಗಾಟ ನಡೆಸುತ್ತಿದ್ದರು ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಅಲ್ಲದೇ ಪೊಲೀಸರು ಆರೋಪಿಗಳ ವಿರುದ್ದ 1981ರ ಆಹಾರ ಕಾಯ್ದೆ ಪ್ರಕಾರ ಕೇಸು ದಾಖಲಿಸಿದ್ದಾರೆ. ಈ ಕಾಯ್ದೆ ಜಾರಿಯಾಗಿ 15 ವರ್ಷದ ಬಳಿಕ ಪ್ರಕರಣ ದಾಖಲಾದರೆ ಜಾಮೀನು ನೀಡಬಹುದು ಎಂದು ಉಲ್ಲೇಖವಿದೆ ಎಂಬ ಅಂಶವನ್ನು ನ್ಯಾಯವಾದಿ ನರಸಿಂಹ ಪ್ರಸಾದ್ರವರು ನ್ಯಾಯಧೀಶರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ಜಾಮೀನು ಮಂಜೂರು ಆಗಿದೆ.
ಪ್ರಕರಣದ ವಿವರ : ನಗರ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿ ಸೆ. 20ರಂದು ಮಾಣಿ-ಮೈಸೂರು ಹೆದ್ದಾರಿಯ ಪೋಳ್ಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಆಗ ಪುತ್ತೂರು ಕಡೆಯಿಂದ ಬಂದ ಸ್ವರಾಜ್ ಮಜ್ದಾ(ಕೆಎ 21 ಸಿ 4647) ಲಾರಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿದ ದಾಖಲೆಯಿಲ್ಲದ ಅಕ್ಕಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ತಹಶೀಲ್ದಾರ್‌ರರಿಗೆ ಮಾಹಿತಿ ನೀಡಿದ್ದರು. ನಂತರ ಆಹಾರ ನಿರೀಕ್ಷಕಿ ಸರಸ್ವತಿಯವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು.
ನಂತರ ಲಾರಿ ಚಾಲಕ ಖಲಂದರ್ ಹಾಗೂ ಝಕಾರಿಯರವರನ್ನು ಬಂಧಿಸಿ ಲಾರಿ ಹಾಗೂ ಸುಮಾರು ಎರಡು ಲಕ್ಷ ರೂ. ಮೌಲ್ಯದ 9250 ಕೆ.ಜಿ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಅಕ್ರಮ ದಾಸ್ತಾನು ಹಾಗೂ ಅಧಿಕ ಬೆಲೆ ಮಾರಾಟ ವಿರುದ್ಧ ಪ್ರಕರಣ ದಾಖಲಾಗಿತ್ತು.