ಮಂಗಳೂರು: ನಗರದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ನ ಕೇಂದ್ರ ಕಚೇರಿಯನ್ನು ಮುಂಬೈಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಿಂದ ಮಂಗಳೂರಿನ ಹೆಗ್ಗಳಿಕೆ ಇಲ್ಲವಾಗಲಿದೆ ಎಂದು ವಕೀಲ ಉಳೇಪಾಡಿ ದಿನೇಶ್ ಹೆಗ್ಡೆ ಹೇಳಿದರು.
ನಗರದಲ್ಲಿ ಕರಾವಳಿಯ ಸಮಾನಮನಸ್ಕರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ಗಳು ಹೆಗ್ಗಳಿಕೆಯಾಗಿತ್ತು. ಹಿಂದಿನ ಸ್ಟೇಟ್ ಬ್ಯಾಂಕ್ ವಿಲೀನ, ವಿಜಯ ಬ್ಯಾಂಕ್ ವಿಲೀನದ ಸಾಧಕಬಾಧಕ ಚರ್ಚಿಸದೆ ಇದೀಗ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ನೊಂದಿಗೆ ವಿಲೀನ ಮಾಡಲಾಗಿದೆ. ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ನೊಂದಿಗೆ ವಿಲೀನ ಮಾಡಲಾಗಿದ್ದು, ಮಂಗಳೂರಿನಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ನ ಕೇಂದ್ರ ಕಚೇರಿ ಮುಂಬೈಗೆ ಸ್ಥಳಾಂತರವಾಗಲಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.
ಕರಾವಳಿಯ ಹೆಗ್ಗಳಿಕೆಯನ್ನು ಕಳೆದುಕೊಂಡು ಕರಾವಳಿಯದೆಂದು ಹೇಳಲು ಏನೂ ಇಲ್ಲದಂತಾಗುತ್ತದೆ. ಈ ಬಗ್ಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ದಿನೇಶ್ ಹೆಗ್ಡೆ ಎಚ್ಚರಿಸಿದರು.