ಮಂಗಳೂರು: ಅತ್ಯಾಚಾರ ಕೃತ್ಯವನ್ನು ನಿರ್ಮೂಲನೆ ಮಾಡಲು ರಾಷ್ಟ್ರಪತಿ ಹಾಗೂ ಪ್ರಧಾನಿಯವರು ವಿಶೇಷ ನ್ಯಾಯಾಲಯ ರಚಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಹೈದ್ರಾಬಾದ್ ನಲ್ಲಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಕೃತ್ಯವನ್ನು ಖಂಡಿಸಿ, ಎನ್ಎಸ್‌ಯುಐ ಮತ್ತು ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಬೃಹತ್ ಪ್ರತಿಭಟನಾ ಜಾಥಾವನ್ನು ನಗರದಲ್ಲಿ ನಡೆಸಲಾಗಿತ್ತು. ವಿದ್ಯಾರ್ಥಿಗಳು ಪೋಸ್ಟ್ ಕಾರ್ಡ್ ಕ್ಯಾಂಪೇನ್ ನಡೆಸಿ ರಕ್ತದಲ್ಲಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ನ್ಯಾಯ ದೊರೆಯುವವರೆಗೆ ಹೋರಾಟ ನಡೆಸುವ ಆಕ್ರೋಶ ವಿದ್ಯಾರ್ಥಿಗಳಲ್ಲಿದೆ ಎಂದು ಮಿಥುನ್ ರೈ ಹೇಳಿದರು.
ಸಭೆಗೆ ಮುನ್ನ ನಗರದ ಬಲ್ಮಠದಲ್ಲಿರುವ ಕಲೆಕ್ಟರ್ ಗೇಟ್ ನಿಂದ ಸಂತ ಆ್ಯಗ್ನೆಸ್ ಕಾಲೇಜುವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಈ ಸಂದರ್ಭ 250 ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.