ಸುಳ್ಯ(ದಕ್ಷಿಣ ಕನ್ನಡ): ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳಿಬ್ಬರಿಗೆ ಪುತ್ತೂರು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ಳಾರೆ ನಿವಾಸಿಯಾದ ಝಾಕೀರ್ ಎಂಬಾತ ಕಡಬ ತಾಲೂಕಿನ ಸವಣೂರಿನಲ್ಲಿ ಫಾಸ್ಟ್ಫುಡ್ ಅಂಗಡಿ ವ್ಯವಹಾರ ನಡೆಸುತ್ತಿದ್ದಾನೆ. ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಅಡಿಕೆ ಖರೀದಿ ಅಂಗಡಿಯೊಂದರಲ್ಲಿ ಶಫೀಕ್ ಎಂಬ ಇನ್ನೊಬ್ಬ ಆರೋಪಿ ಕೆಲಸ ಮಾಡುತ್ತಿದ್ದ. ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಬೆಳ್ಳಾರೆ ಠಾಣೆಯ ಪೊಲೀಸರು ಗುರುವಾರ ಸಂಜೆ ವೈದ್ಯಕೀಯ ತಪಾಸಣೆ ನಡೆಸಿ ಪುತ್ತೂರಿನ ಪ್ರಧಾನ ಹಿರಿಯ ವ್ಯಾವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಧೀಶರಾದ ಗೌಡ.ಆರ್.ಪಿ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು. ಐಪಿಸಿ ಕಲಂ 302 ಅಡಿಯಲ್ಲಿ ಆರೋಪಿಗಳು ಬಂಧಿತರಾಗಿದ್ದಾರೆ. ಪ್ರಕರಣದ ತನಿಖೆಗೆ ಅಗತ್ಯವಿದ್ದಲ್ಲಿ ಪೊಲೀಸರು ಮತ್ತೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಲಿದ್ದಾರೆ ಎಂದು ಸರ್ಕಾರಿ ಪರ ವಕೀಲರು ತಿಳಿಸಿದರು.
ಇದನ್ನೂ ಓದಿ: ಸುರತ್ಕಲ್ ಫಾಜಿಲ್ ಹತ್ಯೆ ಪ್ರಕರಣ: ಮಂಗಳೂರಿನ 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ