ಮಂಗಳೂರು: ಮಾನಸಿಕ ಅಸ್ವಸ್ಥನನ್ನು ಪೋಲೀಸ್ ಪೇದೆಯೊಬ್ಬರು ಅಮಾನವೀಯವಾಗಿ ಲಾಠಿಯಿಂದ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಕಡಬ ಜಾತ್ರೆ ಸಂದರ್ಭ ಮುಖ್ಯ ರಸ್ತೆಯಲ್ಲಿ ದೇವರ ಮೆರವಣಿಗೆ ಸಾಗುತ್ತಿದ್ದ ವೇಳೆ, ಮಾನಸಿಕ ಅಸ್ವಸ್ಥನಿಗೆ ಪೇದೆ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ.
ಮಾನಸಿಕ ಅಸ್ವಸ್ಥನಾಗಿದ್ದ ಈ ವೃದ್ಧ ಯಾರಿಗೋ ಬೈಯುತ್ತ ಕೈಯಲ್ಲಿ ಕಲ್ಲು ಹಿಡಿದುಕೊಂದಿದ್ದ ಎನ್ನುವ ಕಾರಣಕ್ಕೆ ಪೇದೆ ಆತನಿಗೆ ಲಾಠಿಯಿಂದ ಹೊಡೆದಿದ್ದಾರೆ. ಬಿರು ಬಿಸಿಲಿನಲ್ಲಿ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿರುವ ದೃಶ್ಯಗಳು ವಿಡಿಯೋದಲ್ಲಿದ್ದು, ಈ ಘಟನೆ ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ವೃದ್ಧನ ಮೇಲೆ ಹಲ್ಲೆ ಮಾಡಿದ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಪಂಪಾಪತಿ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಇದೇ ಸುದ್ದಿ ಹರಿದಾಡುತ್ತಿದೆ.