ಬೆಳ್ತಂಗಡಿ: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪುತ್ತಿಲ ಗ್ರಾಮದ ಮಿತ್ತೇರಿ ಪಾದೆ ಎಂಬಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವನನ್ನು ಬಂಧಿಸಿ, 70 ಕೆಜಿ ಮಾಂಸ, ಒಂದು ಟಾಟಾ ಏಸ್ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಫಾರೂಕ್ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಮಿತ್ತೇರಿ ಪಾದೆಯ ಸುಲೈಮಾನ್ ಎಂಬುವರ ಮನೆ ಸಮೀಪ ಶೆಡ್ವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪುಂಜಾಲಕಟ್ಟೆ ಎಸ್ಐ ಸುನೀತಾ ಕೆ.ಆರ್ ಹಾಗೂ ತಂಡ ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲೇ ಗೋವುಗಳ ವಧೆ ಮಾಡಿ ಮಾಂಸವನ್ನು ಗೋಣಿಯಲ್ಲಿ ತುಂಬುತ್ತಿದ್ದವರು ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಫಾರೂಕ್ ಮಾತ್ರ ಸಿಕ್ಕಿಬಿದ್ದಿದ್ದಾನೆ.
ದಾಳಿಯಲ್ಲಿ 70 ಕೆಜಿ ಗೋಮಾಂಸ, ಕೃತ್ಯಕ್ಕೆ ಉಪಯೋಗಿಸಿದ ಸಲಕರಣೆ ಹಾಗೂ ಸಾಗಣೆಕ್ಕೆ ಉಪಯೋಗಿಸುತ್ತಿದ್ದ ಟಾಟಾ ಏಸ್ ವಾಹನ, 3 ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ಒಂದು ಲಕ್ಷದ 61 ಸಾವಿರ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.