ಮಂಗಳೂರು: ದ.ಕ.ಜಿಲ್ಲೆಯ ಅದೆಷ್ಟೋ ಜನರು ಉದ್ಯೋಗ ಅರಸಿ ವಿದೇಶ ಆಶ್ರಯಿಸಿದ್ದಾರೆ. ಆದರೆ ಇಲ್ಲಿ ಅಂಥವರ ಹೆತ್ತವರು, ರಕ್ತ ಸಂಬಂಧಿಗಳು ಮಾತ್ರ ಇಲ್ಲಿ ವಾಸವಾಗಿದ್ದಾರೆ. ಕೋವಿಡ್ ನ ಈ ಸಂಕಷ್ಟ ಕಾಲದಲ್ಲಿ ಅಂತಹ ಹಿರಿಯ ನಾಗರಿಕರ ನೆರವಿಗಾಗಿ ನಗರ ಪೊಲೀಸ್ ಹೆಲ್ಪ್ ಲೈನ್ ಆರಂಭವಾಗಲಿದೆ.
ಈ ಮೂಲಕ ರಾಜ್ಯಕ್ಕೇ ಈ ವಿಭಿನ್ನ ಯೋಜನೆ ಮಾದರಿಯಾಗಲಿದೆ. ಸದ್ಯದಲ್ಲೇ ಈ 'ನಗರ ಪೊಲೀಸ್ ಹೆಲ್ಪ್ ಲೈನ್' ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರಂಭವಾಗುತ್ತಿದ್ದು, ಈ ಹಿನ್ನೆಲೆ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಶೀಘ್ರದಲ್ಲಿ ಎನ್ಆರ್ ಐಗಳ ಜೊತೆ ವೆಬಿನಾರ್ ಮೂಲಕ ಮಾತನಾಡಲಿದ್ದಾರೆ.
ವೆಬಿನಾರ್ನ ಸಿದ್ಧತೆಯನ್ನು ನಗರ ಅಪರಾಧ ಪತ್ತೆದಳದ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಪೊಲೀಸ್ ಕಮಿಷನರ್ ಸೇರಿ ಡಿಸಿಪಿಗಳು ಹಾಗೂ ಎಸಿಪಿಗಳು ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಎನ್ಆರ್ ಐ ಗಳ ರಕ್ತಸಂಬಂಧಿಗಳು ಅಥವಾ ಹೆತ್ತವರಾಗಿರುವ ಹಿರಿಯ ನಾಗರಿರು ಯಾರಾದರೂ ಸಂಕಷ್ಟದಲ್ಲಿದ್ದಲ್ಲಿ ನೇರವಾಗಿ ಈ ನಗರ ಪೊಲೀಸ್ ಹೆಲ್ಪ್ ಲೈನ್ಗೆ ಕರೆ ಮಾಡಬಹುದು. ಇಲ್ಲದಿದ್ದಲ್ಲಿ ನೇರವಾಗಿ ಎನ್ಆರ್ ಐಗಳೇ ಕರೆ ಮಾಡಬಹುದು. ಈ ಮೂಲಕ ಹಿರಿಯ ನಾಗರಿಕರಿಗೆ ಅವಶ್ಯಕತೆ ಇರುವ ಆಹಾರ, ವೈದ್ಯಕೀಯ ವ್ಯವಸ್ಥೆ, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಯನ್ನು ಪೊಲೀಸ್ ಹೆಲ್ಪ್ ಲೈನ್ ಮೂಲಕ ಮಾಡಲಾಗುತ್ತದೆ. ಅಲ್ಲದೇ ಅವರಿಗೆ ಹೋಮ್ ಐಸೋಲೇಷನ್, ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ಪೊಲೀಸ್ ವಾಹನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಈ ಮೂಲಕ ಎನ್ಆರ್ ಐ ಕುಟುಂಬದ ಹಿರಿಯ ನಾಗರಿಕರಿಗೆ ಅವಶ್ಯಕತೆ ಇದ್ದಲ್ಲಿ ಪೊಲೀಸರೇ ನೆರವಿನ ಸಹಾಯಹಸ್ತ ಚಾಚಲಿದ್ದಾರೆ.