ಮಂಗಳೂರು: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಮ್ಮನ್ನು ಭೇಟಿ ಮಾಡಲು ಅನುಮತಿ ಕೋರಿದ್ದರು. ಆದರೆ, ಅದನ್ನು ನಿರಾಕರಿಸಿ ಊಟಕ್ಕೆ ಹೊರಡುವ ಸಂದರ್ಭದಲ್ಲಿ ಎದ್ದು ನಿಂತಾಗ ತೆಗೆದ ಚಿತ್ರವನ್ನು ರಾಜಾತಿಥ್ಯ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಅವರಿಗೆ ಯಾವುದೇ ರೀತಿಯ ವಿಶೇಷ ಆತಿಥ್ಯ ನೀಡಲಾಗಿಲ್ಲ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಪ್ರಮೋದ್ ಮುತಾಲಿಕ್ ಅವರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದ ವೇಳೆ ಕಮೀಷನರ್ ರಾಜಾತಿಥ್ಯ ನೀಡಿದ್ದಾರೆ ಎಂದು ವೈರಲ್ ಆಗಿರುವ ಫೋಟೋಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಮಸೀದಿಯ ನವೀಕರಣ ಕಾಮಗಾರಿ ವೇಳೆ ದೇವಾಲಯದ ಶೈಲಿ ಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್ ಅವರು ಮಂಗಳೂರಿಗೆ ಇತ್ತೀಚೆಗೆ ಭೇಟಿ ಮಾಡುತ್ತಾರೆ ಎಂದು ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನಮ್ಮ ಕಡೆಯಿಂದ ಫಾಲೋ ಮಾಡಲಾಗುತ್ತಿತ್ತು. ಮಧ್ಯಾಹ್ನದ ವೇಳೆ ಪ್ರಮೋದ್ ಮುತಾಲಿಕ್ ನನ್ನ ಕಚೇರಿಗೆ ಬಂದು ಅನುಮತಿ ಕೇಳಿದ್ದರು. ನಾನು ಅನುಮತಿ ನಿರಾಕರಿಸಿದ್ದೆ. ಅದು ಮಧ್ಯಾಹ್ನ 2.30 ರ ಸಮಯ. ಮಾತುಕತೆ ಮುಗಿದು ನಾನು ಊಟಕ್ಕೆಂದು ಎದ್ದು ಹೋಗುವ ಸಂದರ್ಭದಲ್ಲಿ ತೆಗೆದ ಫೋಟೋ ಇಟ್ಟುಕೊಂಡು ನಾನು ಪ್ರಮೋದ್ ಮುತಾಲಿಕ್ಗೆ ರಾಜಾತಿಥ್ಯ ನೀಡಿದ್ದೆ ಎಂದು ವೈರಲ್ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿದ್ದಾರೆ.
ಓದಿ: ಆಜಾನ್ ವಿರುದ್ಧ ಅಭಿಯಾನ ಮಾಡುವವರು ಭಯೋತ್ಪಾದಕರು: ಬಿ.ಕೆ ಹರಿಪ್ರಸಾದ್ ವಾಗ್ದಾಳಿ