ಮಂಗಳೂರು: ಮದುವೆ ಸಂಭ್ರಮಾಚರಣೆ ವೇಳೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷವನ್ನು ವರನಿಗೆ ಹಾಕಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಗೊಳಿಸಿ ಅವಮಾನ ಮಾಡಿರುವ ಬಗ್ಗೆ ಕೊರಗಜ್ಜ ದೈವದ ಬಳಿಯೇ ದೂರು ನೀಡಿರುವ ಘಟನೆಯೊಂದು ನಗರದ ಅತ್ತಾವರದ ಬಳಿ ನಡೆದಿದೆ.
ವಿಟ್ಲದ ಸಾಲೆತ್ತೂರಿನಲ್ಲಿ ಮದುವೆಯ ಸಂಭ್ರಮದ ನೆಪದಲ್ಲಿ ಮುಸ್ಲಿಂ ಧರ್ಮದ ಯುವಕರು ಮದುಮಗಳ ಮನೆಗೆ ನಡುರಾತ್ರಿ ಬರುವ ವೇಳೆ ವರನಿಗೆ ಕೊರಗಜ್ಜನ ವೇಷ ಹಾಕಿಸಿ ಹಾಡು, ನೃತ್ಯ ಮಾಡುತ್ತಾ ಬಂದಿದ್ದರು. ಇದರ ವಿಡಿಯೋ ವೈರಲ್ ಆಗಿದ್ದು, ಹಿಂದೂ ಧರ್ಮೀಯರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಈ ಬಗ್ಗೆ ದೂರು ಕೂಡಾ ದಾಖಲಾಗಿತ್ತು.
ಈ ಪ್ರಕರಣದಿಂದ ಬೇಸರಗೊಂಡ ಭಕ್ತರು ಮೇಲಿನಮೊಗರು ಅತ್ತಾವರ ಪರಿಸರದಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ನಿನ್ನೆ ರಾತ್ರಿ ನಡೆದಿರುವ ಕೋಲದ ಸಂದರ್ಭ ಕೊರಗಜ್ಜ ದೈವದೊಂದಿಗೆ ಈ ಬಗ್ಗೆ ದೂರು ಹೇಳಿ, ಅವರಿಗೆ ಶಿಕ್ಷಿಸಬೇಕು ಎಂದು ಕೇಳಿ ಕೊಂಡಿದ್ದಾರೆ.
ಇದನ್ನೂ ಓದಿ: ಕೊರಗಜ್ಜನ ವೇಷ ಹಾಕಿ ವಿಕೃತಿ ಮೆರೆದ ವರ: ಆರೋಪಿಗಳ ವಿರುದ್ಧ ದೂರು ದಾಖಲು
ಆಗ ಕೊರಗಜ್ಜ ದೈವವು, ''ನನ್ನನ್ನು ಯಾವ ರೀತಿ ಮರುಳನಂತೆ ಚಿತ್ರಿಸಿ ಕುಣಿದಾಡಿದರೋ ಅವರನ್ನು ಒಂದು ತಿಂಗಳೊಳಗೆ ಅದೇ ರೀತಿ ಹುಚ್ಚರಂತೆ ಮಾಡಿ ಬೀದಿ ಮೆರವಣಿಗೆ ಮಾಡಿಸುವೆ. ಅಜ್ಜ ಇರೋದು ಹೌದಾದಲ್ಲಿ ಅವರನ್ನು ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ" ಎಂದು ಭಕ್ತರಿಗೆ ಅಭಯ ನೀಡಿದೆ.