ಮಂಗಳೂರು : ಗಣರಾಜ್ಯೋತ್ಸವ ದಿನದಂದು ಕೇಂದ್ರ ಸರ್ಕಾರ ಘೋಷಿಸಿದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞ ಡಾ. ಬಿ ಎಂ ಹೆಗ್ಡೆ ಅವರು ಈಟಿವಿ ಭಾರತದ ಜೊತೆ ಮಾತನಾಡಿ, ತಮಗಾದ ಸಂತಸ ಹಂಚಿಕೊಂಡಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಯಾವುದೇ ಪ್ರಶಸ್ತಿ ಪಡೆಯುವುದು ದೊಡ್ಡದಲ್ಲ. ಜೀವನದಲ್ಲಿ ಸಮಾಜಕ್ಕೆ ನಾವು ನೀಡುವ ಕೊಡುಗೆ ಮತ್ತು ಮುಂದೆಯೂ ಜನರಿಗೆ ಸೇವೆ ಸಲ್ಲಿಸುವುದು ದೊಡ್ಡ ಸಂಗತಿ ಎಂದು ಹೇಳಿದರು.
ಡಾ. ಬಿ ಎಂ ಹೆಗ್ಡೆ ಪರಿಚಯ : ಬೆಳ್ಳೆ ಮೋನಪ್ಪ ಹೆಗ್ಡೆ ಖ್ಯಾತ ಹೃದ್ರೋಗ ತಜ್ಞರಲ್ಲೊಬ್ಬರು. ಅವರು ಜನಿಸಿದ್ದು ಉಡುಪಿ ಜಿಲ್ಲೆಯ ಬೆಳ್ಳೆ ಎಂಬಲ್ಲಿ. 1938 ಆಗಸ್ಟ್ 18ರಂದು ಜನಿಸಿದ್ದ ಅವರಿಗೆ ಈಗ 82 ವರುಷ. ಉಡುಪಿಯ ಹಿರಿಯಡ್ಕದ ಬೋರ್ಡ್ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು.
ನಂತರ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿದ್ದರು. ನಂತರ 1960ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪೂರೈಸಿದರು.
ಇದನ್ನೂ ಓದಿ...ಬಿಎಂ ಹೆಗ್ಡೆಗೆ ಪದ್ಮವಿಭೂಷಣ, ಚಂದ್ರಶೇಖರ್ ಕಂಬಾರ್ಗೆ ಪದ್ಮಭೂಷಣ ಗೌರವ
ಲಖನೌ ವಿಶ್ವವಿದ್ಯಾಲಯದಲ್ಲಿ ಎಂಡಿ ಪದವಿ ಪಡೆದ ಅವರು, ಉನ್ನತ ಶಿಕ್ಷಣಕ್ಕಾಗಿ ಲಂಡನ್ಗೆ ತೆರಳಿದರು. ನೋಬೆಲ್ ಪಾರಿತೋಷಕ ಪುರಸ್ಕೃತ ಪ್ರೊ. ಬೆರ್ನಾರ್ಡ್ ಲೋವ್ನ್ ಅವರೊಂದಿಗೆ ಸೇವೆ ಸಲ್ಲಿಸಿದ ಹೆಗ್ಡೆ, ಲಂಡನ್ ಕಾಲೇಜಿನ ಎಂಆರ್ಸಿಪಿ ಪರೀಕ್ಷಕರಾಗಿ ಆಯ್ಕೆಯಾದ ಮೊದಲ ಭಾರತೀಯರಾಗಿದ್ದಾರೆ.
ಸ್ನಾತಕ, ಸ್ನಾತಕೋತ್ತರ ಹಾಗೂ ಪಿಹೆಚ್‌ಡಿ ಪರೀಕ್ಷಕರಾಗಿ ದಕ್ಷಿಣ ಅಮೆರಿಕ ಬಿಟ್ಟು ಜಗತ್ತಿನ ಉಳಿದ ಎಲ್ಲಾ ಖಂಡಗಳ ಪ್ರಮುಖ ವಿಶ್ವ ವಿದ್ಯಾಲಯಗಳಿಗೆ ಭೇಟಿ ನೀಡಿದ್ದಾರೆ.
ಹುಟ್ಟೂರು ಮಣಿಪಾಲ ಕಸ್ತೂರ್ ಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಡೀನ್ ಆಗಿ ಕೊನೆಗೆ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ (ಮಾಹೆ) ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಡಾ. ಬಿ.ಎಂ. ಹೆಗ್ಡೆ ಸೇವೆ ಸಲ್ಲಿಸಿದ ಕ್ಷೇತ್ರಗಳು : ಹೃದ್ರೋಗ ತಜ್ಞ, ಉಪನ್ಯಾಸಕ, ಪರೀಕ್ಷಕ, ಸಂಶೋಧಕ, ಬರಹಗಾರ, ಲೇಖಕ, ಶಿಕ್ಷಣ ತಜ್ಞ, ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರಿಗೆ 1999ರಲ್ಲಿ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಬಿ.ಸಿ.ರಾಯ್ ಪ್ರಶಸ್ತಿ ಲಭಿಸಿತು. 1997ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ಬಿ.ಎಂ.ಹೆಗ್ಡೆ ಅವರು ಅಲೋಪತಿ ವೈದ್ಯರಾಗಿ ಆಯುರ್ವೇದ ವೈದ್ಯ ಪದ್ಧತಿ ಬಗ್ಗೆ ಒಲವು ಹೊಂದಿದ್ದರು. ಹೀಗಾಗಿ, ಲಂಡನ್ ಥೇಮ್ಸ್ ವ್ಯಾಲಿ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಆರಂಭವಾಗಲು ಕಾರಣಕರ್ತರಾಗಿದ್ದಾರೆ.
ಬಿ.ಎಂ.ಹೆಗ್ಡೆ ಅವರು ಆಧುನಿಕ ವೈದ್ಯಕೀಯ ಪದ್ದತಿಯಲ್ಲಿರುವ ಅನಗತ್ಯ ತಪಾಸಣೆ, ಅನಗತ್ಯ ಔಷಧಗಳ ಮತ್ತು ಅನಗತ್ಯ ಚಿಕಿತ್ಸೆಗಳನ್ನು ಬಲವಾಗಿ ವಿರೋಧಿಸುತ್ತಿದ್ದರು. ವೈದ್ಯ ಸಾಹಿತಿಯಾಗಿರುವ ಅವರು, ಉತ್ತಮ ಭಾಷಣಕಾರರಾಗಿದ್ದು, ಈಗಾಗಲೇ 80 ಜಾಗತಿಕ ದತ್ತಿ ಭಾಷಣಗಳನ್ನು ನೀಡಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ 30ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ.