ಮಂಗಳೂರು(ದಕ್ಷಿಣ ಕನ್ನಡ) : ಉಸಿರಾಟದ ತೊಂದರೆಯಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮಗೌಡ ಅವರನ್ನು 6 ದಿನಗಳ ಹಿಂದೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಗಂಭೀರ ಸ್ಥಿತಿಯಲ್ಲಿದ್ದ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ತಂತು ಶಸ್ತ್ರ ಚಿಕಿತ್ಸೆ ಮತ್ತು ಸಣ್ಣ ಮಟ್ಟಿನ ಹೃದಯದ ಚಿಕಿತ್ಸೆ ಕೂಡ ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಅವರನ್ನು ಎರಡು ದಿನಗಳ ಹಿಂದೆ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು.
ಕೆಎಂಸಿ ಆಸ್ಪತ್ರೆಯಲ್ಲಿ 6 ದಿನಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಘೋಷಿಸಿದ್ದರು. ಇನ್ನು ಕೆಎಂಸಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಡಾ. ನರಸಿಂಹ ಪೈ ಹಾಗೂ ಡಾ. ಮನೀಶ್ ರೈ ವೈದ್ಯರ ತಂಡದ ಸುಕ್ರಿ ಬೊಮ್ಮಗೌಡ ಅವರಿಗೆ ಚಿಕಿತ್ಸೆ ನೀಡಿದೆ.
ಇದನ್ನೂ ಓದಿ: ಜಲಧಾರೆ ಸಮಾವೇಶಕ್ಕೂ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಕುಮಾರಸ್ವಾಮಿ
ಯಶಸ್ವಿ ಚಿಕಿತ್ಸೆ ಬಳಿಕ ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಕ್ಕೆ ಮೂಲತ್ವ ಫೌಂಡೇಶನ್ನ ಪ್ರಕಾಶ್ ಕೋಟ್ಯಾನ್, ಕಲ್ಪನಾ ಕೋಟ್ಯಾನ್ ಹಾಗೂ ಸೊಸೆ ಮಂಗಳಾ ಮತ್ತು ಮಂಜುನಾಥ್ ಅವರು ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಪರಿಸರವಾದಿ, ಕಲಾವಿದ ದಿನೇಶ್ ಹೊಳ್ಳ ಜೊತೆಗಿದ್ದರು.