ಮಂಗಳೂರು: ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನ, ದೈವಸ್ಥಾನಗಳ ಜಾತ್ರಾ ಮಹೋತ್ಸವ, ರಥೋತ್ಸವ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದೆಂಬ ಆದೇಶ ಹೊರಡಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಮೂಲಕ ಧಾರ್ಮಿಕ ದತ್ತಿ ಇಲಾಖೆ ಶಶಿಕಲಾ ಜೊಲ್ಲೆಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದರು.
ನಗರದ ಕದ್ರಿಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಅಧಿನಿಯಮಗಳ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತ್ತಕ್ಕದಲ್ಲ ಎಂಬ ಅಧಿನಿಯಮವಿದೆ. ಈ ಸ್ಪಷ್ಟ ಉಲ್ಲೇಖವಿದ್ದ ಕಾರಣ ಧಾರ್ಮಿಕ ದತ್ತಿ ಇಲಾಖೆಯು ತಕ್ಷಣ ರಾಜ್ಯದ ಎಲ್ಲಾ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾತ್ರಾಮಹೋತ್ಸವ, ರಥೋತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಯೇತರರಿಗೆ ಅವಕಾಶ ಕೊಡಬಾರದು. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಶಶಿಕಲಾ ಜೊಲ್ಲೆಯವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಹಿಂದೂಯೇತರರಿಗೆ ದೇವಾಲಯಗಳ ಜಾತ್ರೋತ್ಸವಗಳಲ್ಲಿ ವ್ಯಾಪಾರ ಅವಕಾಶ ನಿರಾಕರಣೆ ಮಾಡಿರುವುದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸುತ್ತದೆ. ಈ ನಿಲುವನ್ನು ಇಡೀ ಹಿಂದೂ ಸಮಾಜ ಬೆಂಬಲಿಸುತ್ತದೆ. ಇದೇ ಸಂದರ್ಭದಲ್ಲಿ ದೇವಸ್ಥಾನಗಳಿಗೆ ದಿನನಿತ್ಯ ಉಪಯೋಗಿಸುವ ವಸ್ತುಗಳ ಖರೀದಿ, ಗುತ್ತಿಗೆ ಹಾಗೂ ಟೆಂಡರ್ಗಳಲ್ಲೂ ಯಾವುದೇ ಹಿಂದೂಯೇತರರಿಗೆ ಅವಕಾಶ ನೀಡಬಾರದೆಂದು ವಿನಂತಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ದೈವಸ್ಥಾನ, ಭಜನಾ ಮಂದಿರಗಳು ಈ ನಿರ್ಣಯವನ್ನು ಗಣನೆಗೆ ತೆಗೆದುಕೊಂಡು ಜಾತ್ರೆ, ಕೋಲ, ನೇಮಗಳಲ್ಲೂ ಹಿಂದೂಯೇತರರ ಅಂಗಡಿ - ಮುಂಗಟ್ಟುಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ: ಹಿಂದೂಯೇತರರಿಗೆ ದೇವಾಲಯಗಳ ಜಾತ್ರೋತ್ಸವಗಳಲ್ಲಿ ವ್ಯಾಪಾರ ನಿರಾಕರಿಸಿ ಬ್ಯಾನರ್ ಅಳವಡಿಕೆ