ಮಂಗಳೂರು: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಯಲ್ಲಿ 7 ಅಭ್ಯರ್ಥಿಗಳು ಸಲ್ಲಿಸಿದ 13 ನಾಮಪತ್ರಗಳು ಕ್ರಮಬದ್ದವಾಗಿದೆ.
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಬಯಸಿ ಒಟ್ಟು 8 ಮಂದಿ ಅಭ್ಯರ್ಥಿಗಳು 14 ನಾಮಪತ್ರ ಸಲ್ಲಿಸಿದ್ದರು. ನಿನ್ನೆ (ಬುಧವಾರ) ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರ ಕಚೇರಿಯ ಸಭಾಂಗಣದಲ್ಲಿ ಅವುಗಳ ಪರಿಶೀಲನೆ ನಡೆಯಿತು. 14 ನಾಮಪತ್ರಗಳಲ್ಲಿ 13 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಒಂದು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ.
ಒಟ್ಟು 14 ನಾಮಪತ್ರಗಳಲ್ಲಿ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಅದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ ಅವರ 3 ನಾಮಪತ್ರ, ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರ 4 ನಾಮಪತ್ರ, ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಇಸ್ಮಾಯಿಲ್ ಶಾಫಿ ಕೆ. ಅವರ ಒಂದು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೌಶಿಕ್ ಡಿ. ಶೆಟ್ಟಿ ಎರಡು ನಾಮಪತ್ರ, ಪಕ್ಷೇತರ ಅಭ್ಯರ್ಥಿ ನವೀನ್ ಕುಮಾರ್ ರೈ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ನಿತಿನ್ ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಶಶಿಧರ್ ಎಂ. ಅವರು ಸಲ್ಲಿಸಿದ್ದ ಒಂದು ನಾಮಪತ್ರ ಕ್ರಮಬದ್ಧವಾಗಿದ್ದು, ಸ್ವೀಕೃತಗೊಂಡಿವೆ.
ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ
ಪಕ್ಷೇತರ ಅಭ್ಯರ್ಥಿ ಸುಪ್ರಿತ್ ಕುಮಾರ್ ಪೂಜಾರಿ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರಗಳನ್ನು ಹಿಂಪಡೆಯಲು ನ.26 ರ ವರೆಗೆ ಅವಕಾಶ ನೀಡಲಾಗಿದೆ. ಅಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ವಾಪಸ್ ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆಗೆ ಭತ್ತದ ಬೆಳೆ ಹಾನಿ: ಸೂಕ್ತ ಪರಿಹಾರಕ್ಕೆ ರೈತರು ಮನವಿ