ಮಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರ ಕಾರ್ಯಕ್ರಮದಲ್ಲೇ 500 ಕ್ಕಿಂತಲೂ ಮಂದಿ ಭಾಗಿಯಾಗಿ, ಸಾಮಾಜಿಕ ಅಂತರವೂ ಪಾಲನೆಯಾಗದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ವಾಮಂಜೂರು ಬಳಿ ಇರುವ ಗುರುಪುರ ಸೇತುವೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಇಂದು ಲೋಕಾರ್ಪಣೆಗೊಳಿಸಿದರು. ಆದರೆ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮದಲ್ಲಿ 50ಕ್ಕಿಂತ ಅಧಿಕ ಮಂದಿ ಸೇರಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಸರಕಾರದ ನಿಯಮವನ್ನೇ ಗಾಳಿಗೆ ತೂರಲಾಗಿದ್ದು, 500ಕ್ಕಿಂತಲೂ ಅಧಿಕ ಮಂದಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಭಾಗವಹಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆನ್ನುವ ನಿಯಮ ಕೇವಲ ಮೈಕ್ಗೆ ಮಾತ್ರ ಸೀಮಿತವಾಗಿತ್ತು. ನಿರೂಪಕರು ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಯಾರೂ ಕ್ಯಾರೇ ಎನ್ನದೇ ಉದ್ಘಾಟನೆ ವೇಳೆ ಮುಗಿಬಿದ್ದ ಘಟನೆ ನಡೆದಿದೆ. ಅಲ್ಲದೇ ಯಾವುದೇ ಕಾರ್ಯಕ್ರಮಗಳು ಕೇವಲ 50 ಜನರಿಗೆ ಸೀಮಿತವಾಗಬೇಕು ಎನ್ನುವ ನಿಯಮವನ್ನು ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲಿಯೇ ಉಲ್ಲಂಘನೆ ಮಾಡಲಾಗಿರುವುದು ವಿಪರ್ಯಾಸವೇ ಸರಿ.