ಸುಬ್ರಹ್ಮಣ್ಯ: ಕೊರೊನಾ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ದೇವಸ್ಥಾನಗಳಲ್ಲಿ ಸೇವೆಗಳನ್ನು ರದ್ದು ಪಡಿಸಲಾಗಿದೆ. ಕುಕ್ಕೆಯಲ್ಲಿ ಭಕ್ತರು ತಂಗುವ ವ್ಯವಸ್ಥೆಯನ್ನು ನಿಲ್ಲಿಸಲಾಗಿದ್ದು, ಪೂಜೆಗಳಲ್ಲಿ ಪಾಲ್ಗೊಳ್ಳಲು ಸಿಬಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ.
ಹೆಲ್ಪ್ ಡೆಸ್ಕ್ ಆರಂಭ
ಕೊರೊನಾ ಮುಂಜಾಗ್ರತೆಯಾಗಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಆರೋಗ್ಯ ಇಲಾಖೆಯ ವತಿಯಿಂದ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. ಕೊರೊನಾ ರೋಗ ತಡೆಗಟ್ಟುವ ಕುರಿತಾದ ಭಿತ್ತಿಪತ್ರ ಹಾಗೂ ಮುಂಜಾಗ್ರತ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೇ ಇಲ್ಲ
ಸುಬ್ರಹ್ಮಣ್ಯದಿಂದ ಸಂಚರಿಸುವ ಕೆ.ಎಸ್.ಟಿ.ಸಿ ಬಸ್‍ನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಸಾರಿಗೆ ಇಲಾಖೆಗೆ ಅಪಾರ ನಷ್ಟ ಉಂಟಾಗುವ ಸಂಭವವಿದೆ. ಯಾತ್ರಿಕರಿಗೆ ವಿಧಿಸಿರುವ ನಿರ್ಬಂಧದಿಂದ ಸಾರಿಗೆ ಹಾಗೂ ವ್ಯಾಪಾರಸ್ಥರಿಗೆ ತೀವ್ರ ಹೊಡೆತ ಬಿದ್ದಿದೆ. ವ್ಯಾಪಾರವಿಲ್ಲದೇ ಪೇಟೆಯ ಕೆಲವು ವ್ಯಾಪಾರ ಕೇಂದ್ರಗಳನ್ನು ಮುಚ್ಚಲಾಗಿದೆ.
ರೈಲು ಪ್ರಯಾಣಿಕರಲ್ಲೂ ಇಳಿಮುಖ
ಕುಕ್ಕೆ ಸುಬ್ರಹ್ಮಣ್ಯಕ್ಕೆ ರೈಲಿನ ಮೂಲಕ ಆಗಮಿಸುವ ಭಕ್ತರ ಸಂಖ್ಯೆ ಕುಸಿದಿದೆ. ಸುಬ್ರಹ್ಮಣ್ಯದ ನೆಟ್ಟಣ ರೈಲು ನಿಲ್ದಾಣದಲ್ಲಿಯೂ ರೈಲ್ವೆ ಪ್ರಯಾಣಿಕರು ಇರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಸುಬ್ರಹ್ಮಣ್ಯ ಬಸ್ ನಿಲ್ದಾಣವನ್ನು ಪೂರ್ಣ ಶುಚಿಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.