ಪುತ್ತೂರು: ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡುವುದು ಬಿಟ್ಟು ಬೇರೆ ವಿಷಯವೇ ತಿಳಿದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಪುತ್ತೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪೆಟ್ರೋಲ್, ಡೀಸೇಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ವಿರೋಧ ಮಾಡಲು ಆರಂಭಿಸಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೆ ಅದಕ್ಕೂ ವಿರೋಧ, ಜನಪರ ವ್ಯವಸ್ಥೆಗಳನ್ನು ಕೈಗೊಂಡಲ್ಲಿ ಅದಕ್ಕೂ ವಿರೋಧ ಮಾಡುತ್ತಿರುವ ಕಾಂಗ್ರೆಸ್ ಇತ್ತೀಚೆಗೆ ಕೋವಿಡ್ ಲಸಿಕೆ ವಿಚಾರದಲ್ಲೂ ದೇಶದಾದ್ಯಂತ ವಿರೋಧ ಮಾಡಿತ್ತು. ಇದೀಗ ಪೆಟ್ರೋಲ್, ಡಿಸೇಲ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆ ಅನಿವಾರ್ಯವಾಗಿ ದೇಶದಲ್ಲೂ ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಏರಿಸಬೇಕಾಗಿದೆ. ಈ ಬೆಳವಣಿಗೆ ದೇಶದಲ್ಲಿ ಎಲ್ಲಾ ಪಕ್ಷಗಳ ಆಡಳಿತವಿದ್ದಾಗಲೂ ನಡೆದುಕೊಂಡು ಬಂದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಹಾಗೂ ಇಳಿಕೆಯ ಅಧಾರದ ಮೇಲೆ ದೇಶದಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ, ಇಳಿಕೆ ಮಾಡುತ್ತಿದೆ ಎಂದು ವಿವರಿಸಿದರು.
ಜೂನ್ 14ರ ಬಳಿಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಲಾಕ್ಡೌನ್ ಮುಂದುವರಿಸುವ ಅನಿವಾರ್ಯತೆಯಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 500ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಖ್ಯೆ ಕಡಿಮೆಯಾಗದೆ ಜಿಲ್ಲೆಯಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭಿಸುವುದು ಕಷ್ಟಸಾಧ್ಯ ಎಂದರು.