ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯಗಳ ವಲಸೆ ಕಾರ್ಮಿಕರಿಗೆ ಅವರ ಊರಿಗೆ ತೆರಳಲು ಅನುಕೂಲವಾಗುವಂತೆ ಮಂಗಳೂರು ರೈಲು ನಿಲ್ದಾಣದಿಂದ ರೈಲಿನ ವ್ಯವಸ್ಥೆ ಮಾಡುವಂತೆ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ.
![Nalin Kumar Katil's letter to the railway minister](https://etvbharatimages.akamaized.net/etvbharat/prod-images/kn-mng-02-nalin-letter-photo-7202146_08052020193503_0805f_1588946703_432.jpg)
ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರಿಗೆ ಪತ್ರ ಬರೆದು ಹೊರ ರಾಜ್ಯಗಳ ವಲಸೆ ಕಾರ್ಮಿಕರಿಗೆ ಶೀಘ್ರ ರೈಲಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸುಮಾರು 3,500 ಹೊರ ರಾಜ್ಯಗಳ ಕಾರ್ಮಿಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ವೈರಸ್ ರೋಗದಿಂದ ಲಾಕ್ಡೌನ್ ಆಗಿರುವುದರಿಂದ ಅವರು ತಮ್ಮ ಊರುಗಳಿಗೆ ಮರಳಲು ಬಯಸುತ್ತಿದ್ದಾರೆ.
ಅವರು ನಮ್ಮ ಕರ್ನಾಟಕ ಸರಕಾರದ ಸೇವಾ ಸಿಂಧು ಅರ್ಜಿಯಲ್ಲಿ ಹೆಸರು ನೊಂದಾಯಿಸಿದ್ದು, ಬಿಹಾರ, ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ಉತ್ತರ ಭಾರತದ ವಿವಿಧ ಭಾಗಗಳ ನಿವಾಸಿಗಳಾಗಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಭ್ಯವಿಲ್ಲದೆ ಇರುವುದರಿಂದ ತಮ್ಮ ಊರುಗಳಿಗೆ ಮರಳಲು ಉಚಿತ ರೈಲು ಪ್ರಯಾಣಕ್ಕೆ ಈ ಕಾರ್ಮಿಕರು ಮನವಿ ಮಾಡಿದ್ದಾರೆ.
ಆದ್ದರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವಾಸಿಸುತ್ತಿರುವ ಹೊರ ರಾಜ್ಯಗಳ ಕಾರ್ಮಿಕರ ಬೇಡಿಕೆಯನ್ನು ಶೀಘ್ರದಲ್ಲಿ ಪರಿಗಣಿಸಿ ಮಂಗಳೂರು ರೈಲು ನಿಲ್ದಾಣದಿಂದ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ರೈಲು ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.