ಮಂಗಳೂರು: ಪ್ರಧಾನಿಯವರ ಪಿಎಂ ಕೇರ್ಸ್ ಫಂಡ್ಅನ್ನ ವೈಯುಕ್ತಿಕ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಕಾಂಗ್ರೆಸ್ ಯಾವುದೇ ಆಧಾರವಿಲ್ಲದೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರೋದು ಆಧಾರ ರಹಿತವಾದದ್ದು, ಇದು ಕಾಂಗ್ರೆಸ್ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಕೋವಿಡ್-19 ಸೋಂಕು ನಿಯಂತ್ರಣದಲ್ಲಿ ಇಡೀ ಜಗತ್ತು ಪ್ರಧಾನಿ ನರೇಂದ್ರ ಮೋದಿಯವರನ್ನ ಒಪ್ಪಿದೆ. ಆದರೆ ಜಗತ್ತು ಭಾರತವನ್ನ ಒಪ್ಪಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಕೀಳುಮಟ್ಟದ ರಾಜಕೀಯ ಮಾಡುತ್ತಿರೋದು ಖಂಡನೀಯ. ಈ ಮೂಲಕ ಕಾಂಗ್ರೆಸ್, ದೇಶದ ಪ್ರಧಾನಿಯವರ ಬಗ್ಗೆ ಜನರಲ್ಲಿ ಅಪನಂಬಿಕೆ ಉಂಟು ಮಾಡುವುದಲ್ಲದೆ, ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ನಾನು ಪ್ರಕರಣ ದಾಖಲಿಸಿಕೊಂಡ ಠಾಣಾಧಿಕಾರಿ ಪ್ರವೀಣ್ ಕುಮಾರ್ ಅವರನ್ನು ಅಭಿನಂದಿಸುತ್ತೇನೆ ಎಂದರು.
ಆದರೆ, ಕಾಂಗ್ರೆಸ್ ನಾಯಕರು ಈ ಪ್ರಕರಣ ಹಿಂಪಡೆಯಬೇಕು. ಅಲ್ಲಿನ ಠಾಣಾಧಿಕಾರಿ ಮೇಲೆ ಕೇಸ್ ದಾಖಲಿಸಬೇಕೆಂದು ಹೇಳುತ್ತಿದ್ದಾರೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಯವರಲ್ಲಿ ಯಾವುದೇ ಕಾರಣಕ್ಕೂ ಈ ಪ್ರಕರಣ ಹಿಂಪಡೆಯದಂತೆ ಒತ್ತಡ ಹೇರುತ್ತೇನೆ. ಅಲ್ಲದೆ ಪ್ರಧಾನಿಯವರ ಬಗ್ಗೆ ಆಧಾರ ರಹಿತ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಆಧಾರ ಇಲ್ಲದೆ ಪುಂಖಾನುಪುಂಖವಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಚಾಳಿಯಾಗಿದೆ. ಕಾಂಗ್ರೆಸ್ಗೆ ದೇಶದ ಜನರ ಬಗ್ಗೆ, ರಾಷ್ಟ್ರದ ಬಗ್ಗೆ ಕಾಳಜಿ ಇದ್ದಲ್ಲಿ ಕೊವೀಡ್-19 ಸೋಂಕಿನ ವಿರುದ್ಧ ಒಂದಾಗಿ ಹೋರಾಟ ಮಾಡಬೇಕಿತ್ತು. ಆದರೆ ವಲಸೆ ಕಾರ್ಮಿಕರನ್ನ ಎತ್ತಿಕಟ್ಟುವ ಕೆಲಸ ಮಾಡಿ, ಜನರನ್ನು ಬೀದಿಗಿಳಿಸುವಂತೆ ಮಾಡುವ ಮೂಲಕ ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದರು.
ಡಿಕೆಶಿಯವರಿಗೆ ರಾಷ್ಟ್ರದ, ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಆಹಾರ ಸಾಮಾಗ್ರಿ ಕೊಡುವ ವೇಳೆ ಹಾಗೂ ವಲಸೆ ಕಾರ್ಮಿಕರು ತೆರಳುವ ಸಂದರ್ಭದಲ್ಲಿ ಸಹಕಾರ ನೀಡಬೇಕಿತ್ತು. ಅದನ್ನ ಬಿಟ್ಟು ರಾಜಕೀಯ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಳೆದ ಏಳು ದಶಕದಲ್ಲಿ ಗಾಂಧಿ ಕುಟುಂಬದ ಕೇರ್ ಬಿಟ್ಟು ದೇಶದ ಕೇರ್ ಮಾಡಿದ್ಯಾ? ಪ್ರಧಾನಿ ಹುದ್ದೆಗೆ ಅವಮಾನ ಮಾಡಿದ ನಿಮ್ಮನ್ನು ಜನರು ಎಂದಿಗೂ ಕ್ಷಮಿಸೋದಿಲ್ಲ ಎಂದಿದ್ದಾರೆ.