ಮಂಗಳೂರು: ಸಾವಿರಾರು ಪ್ರದರ್ಶನ ಕಂಡ ಟೊಳ್ಳುಗಟ್ಟಿ ನಾಟಕ ಈಗ ಚಲನಚಿತ್ರವಾಗಿ ತೆರೆಗೆ ಬರಲಿದೆ.
ಜೈಗುರು ಕ್ರಿಯೇಷನ್ ಅರ್ಪಿಸುವ ಈ ಚಲನಚಿತ್ರವನ್ನು ಗುರುದತ್ ಶ್ರೀಕಾಂತ್ ಎಂಬ ಯುವ ನಿರ್ದೇಶಕ ಪರಿಕಲ್ಪನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಬರೆದು ನಿರ್ದೇಶನ ಮಾಡಿದ್ದಾರೆ.
ಟಿಪಿಕಲ್ ಶಬ್ದಗಳನ್ನು ಬಳಸಿ, ಕಂಗ್ಲಿಷ್ ಭಾಷೆಯನ್ನು(ಕನ್ನಡ-ಇಂಗ್ಲಿಷ್ ಮಿಶ್ರಿತ ಭಾಷೆ) ಬಳಸಿ ಪ್ರಸಿದ್ಧಿ ಪಡೆದ ಟಿ.ಪಿ.ಕೈಲಾಸಂ ಅವರ ವಿಶಿಷ್ಟ ಶೈಲಿಯ ಸಂಭಾಷಣೆಯನ್ನು ಚಿತ್ರದಲ್ಲಿ ಅದ್ಭುತವಾಗಿ ಬಳಸಿಕೊಳ್ಳಲಾಗಿದೆ. ಆದರೆ ಪ್ರೇಕ್ಷಕರಿಗೆ ಯಾವುದೇ ರೀತಿಯ ಭಾಷೆಯ ಸಮಸ್ಯೆಯಾಗದಂತೆ ಸಂಭಾಷಣೆಯನ್ನು ಬಳಸಿಕೊಳ್ಳಲಾಗಿದೆ ಎಂದು ಸಿನಿಮಾದ ಪ್ರಮುಖ ನಟ ಸಂದೀಪ್ ಮಲಾನಿ ಹೇಳಿದರು.
ಅನೇಕ ಚಿತ್ರಗಳಲ್ಲಿ ನಟಿಸಿದ ನನಗೆ ಮೂಕವಿಸ್ಮಿತ ಚಿತ್ರದ ಹಿರಿಯಣ್ಣನ ಪಾತ್ರ ಅತೀವ ತೃಪ್ತಿ ತಂದಿದೆ. ನನ್ನ ಇಪ್ಪತ್ತೈದು ವರ್ಷಗಳ ನಿರ್ದೇಶನ ಹಾಗೂ ನಟನೆಯ ಬದುಕಿನಲ್ಲಿ ಅತ್ಯಂತ ನೆನಪಿನಲ್ಲಿ ಉಳಿಯುವಂತಹ ಪಾತ್ರವಾಗಿದೆ. ಈ ಸಿನಿಮಾಕ್ಕೆ ಪ್ರಶಸ್ತಿಯೂ ಬರಬಹುದು ಎಂಬ ನಿರೀಕ್ಷೆಯೂ ಇದೆ ಎಂದ್ರು.
ಟೊಳ್ಳುಗಟ್ಟಿ ನಾಟಕ 1920ರ ಕಾಲಘಟ್ಟದ ಕಥೆಯನ್ನು ಒಳಗೊಂಡಿರುವಂಥದ್ದು. ಆದರೆ ಸಿನಿಮಾ ರೂಪಕ್ಕೆ ತಂದಾಗ ಕಥೆಯನ್ನು 1950ರ ಕಾಲಕ್ಕೆ ಬದಲಾವಣೆ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವದ ಕಥಾಹಂದರವುಳ್ಳ ಈ ಸಿನಿಮಾವನ್ನು ಅತೀ ಕಡಿಮೆ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ಬಹುತೇಕ ನಾಟಕ ರಂಗದ ಕಲಾವಿದರೇ ಬಣ್ಣ ಹಚ್ಚಿದ್ದು, ಉಳಿದಂತೆ ಚಿತ್ರಕ್ಕೆ ಡಾ. ಚಿನ್ಮಯ ಎಂ. ರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ.