ಮಂಗಳೂರು: ಅನ್ಯ ರಾಜ್ಯದಿಂದ ಸ್ವಂತ ವಾಹನ, ರೈಲು, ಬಸ್ಗಳ ಮೂಲಕ ಬಂದರೂ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ. ಆದರೆ, ಗೂಡ್ಸ್ ಲಾರಿ, ಟೆಂಪೋ ಚಾಲಕರಿಗೆ ಯಾವುದೇ ತಪಾಸಣೆ ಹಾಗೂ ಕ್ವಾರಂಟೈನ್ ಇಲ್ಲ. ಇದು ಯಾವ ನಿಯಮ. ಸರ್ಕಾರ ಇವರಿಗೂ ಯಾವುದಾದ್ರೂ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ಯು ಟಿ ಖಾದರ್ ಆಗ್ರಹಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಸರ್ಕಾರದ ಕೆಲ ನಿಯಮಗಳು ಕೊರೊನಾ ವಾರಿಯರ್ಗಳಾಗಿ ದುಡಿಯುವವರಿಗೆ ಸಂಕಷ್ಟ ತಂದಿದೆ. ಏಳು ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾದವರಿಗೆ ನೆಗೆಟಿವ್ ಇದೆ ಎಂಬ ಭ್ರಮೆ ಬೇಡ. ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಕಡ್ಡಾಯವಾಗಿ ಪಾಲಿಸಬೇಕು. ತಪಾಸಣೆ ಬಳಿಕ ನೆಗೆಟಿವ್ ಬಂದ್ರೆ ರೋಗವೇ ಇಲ್ಲವೆಂದು ತಿರುಗಾಟ ಮಾಡುವುದು ಬೇಡ. ಈ ಬಗ್ಗೆ ಸರ್ಕಾರ ಬಹಳ ಸ್ಪಷ್ಟವಾಗಿ ನಿಯಮ ಮಾಡಿಕೊಳ್ಳಬೇಕು ಎಂದರು.
ಕಳೆದ ನಾಲ್ಕು ದಿನಗಳಿಂದ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರಲ್ಲೂ ಸೋಂಕು ಕಾಣಿಸಿದೆ. ಆದ್ದರಿಂದ ಉಳ್ಳಾಲ ಪೊಲೀಸರಿಗೆ ಉಚಿತವಾಗಿ ಗಂಟಲು ದ್ರವ ತಪಾಸಣೆ ಮಾಡಲಾಗಿದೆ. ಪೊಲೀಸ್, ಆರೋಗ್ಯ ಇಲಾಖೆ ಸೇರಿ ಸರ್ಕಾರಿ ಅಧಿಕಾರಿಗಳು ಜನರ ಪರ ಕೆಲಸ ಮಾಡಿ ಸೋಂಕಿತರಾಗುತ್ತಿದ್ದಾರೆ. ಆದ್ದರಿಂದ ಕೊರೊನಾ ವಾರಿಯರ್ಗಳ ಹಿತಾಸಕ್ತಿಯನ್ನ ಸರ್ಕಾರ ಕಾಪಾಡಬೇಕಾಗಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ, ಅಲ್ಲಿನ ಮೀನು, ಬೀದಿ ವ್ಯಾಪಾರಿಗಳು, ರಿಕ್ಷಾ, ಟೆಂಪೋ, ಟ್ಯಾಕ್ಸಿ, ಬಸ್ ಚಾಲಕ ಮತ್ತು ನಿರ್ವಾಹಕರಿಗೂ ಕೂಡಾ ಉಚಿತ ಗಂಟಲು ದ್ರವ ತಪಾಸಣೆ ಮಾಡಬೇಕೆಂದು ಕಡ್ಡಾಯಗೊಳಿಸಲಾಗಿದೆ ಎಂದರು.
ಸೋಂಕಿತರು ಇರುವ ಕೋಡಿ, ಮಾಸ್ತಿಕಟ್ಟೆ, ಅಝಾದ್ ನಗರ ಪ್ರದೇಶಗಳಲ್ಲಿ ಕಾರ್ಯಪಡೆ ಮಾಡಿ, ಜನರಿಗೆ ಸೋಂಕಿನ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ, ಸ್ಥಳೀಯರ ಕೋರಿಕೆಯ ಮೇರೆಗೆ ಈ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಕೆಲಸಕ್ಕೆ ಹೋಗುವವರನ್ನ ಹೊರತುಪಡಿಸಿ ಯಾರು ಅನಗತ್ಯ ಹೊರಗಡೆ ಸುತ್ತಾಡುವಂತಿಲ್ಲ ಎಂದರು.