ಮಂಗಳೂರು: ವೆನ್ಲಾಕ್ ಕೋವಿಡ್ ಆಸ್ಪತ್ರೆ ವ್ಯವಸ್ಥೆ ಅಸಮರ್ಪಕವಾಗಿದೆ ಎಂದು ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಆಸ್ಪತ್ರೆಯ ಕುರಿತು ಕೀಳಾಗಿ ಮಾತನಾಡಿ ವಿಡಿಯೋ ಚಿತ್ರೀಕರಿಸುವುದು. ವೈದ್ಯರು, ಸಿಬ್ಬಂದಿ ವಿರುದ್ಧ ತಪ್ಪು ಸಂದೇಶ ರವಾನಿಸಲಾಗುತ್ತಿದೆ. ಓರ್ವನ ಹುಚ್ಚುತನದಿಂದ ಎಲ್ಲರಿಗೂ ಸಮಸ್ಯೆ. ವ್ಯವಸ್ಥೆ ಸರಿ ಇಲ್ಲದಿದ್ದಲ್ಲಿ ಸಲಹೆ ಕೊಡಬೇಕೇ ಹೊರತು ವಿಡಿಯೋ ಮಾಡಿ ಜನರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಮೂಡಿಸುವುದು ತಪ್ಪು ಎಂದರು.
ಆಸ್ಪತ್ರೆಯಲ್ಲಿ ಸೋಂಕಿತರನ್ನು ಒಂದೇ ವಾರ್ಡ್ನಲ್ಲಿ ಇರಿಸುವ ಬದಲಿಗೆ ಸ್ಕ್ರೀನ್ ಹಾಕಿ ರೋಗಿಗಳನ್ನು ವಿಭಾಗಿಸಲಿ. ಅಲ್ಲಿ ಬೇಕಾದಷ್ಟು ಸ್ಯಾನಿಟೈಸರ್, ಗ್ಲೌಸ್ ವ್ಯವಸ್ಥೆ ಮಾಡಬೇಕು. ರೋಗಿಗಳು ಶೌಚಾಲಯಕ್ಕೆ ಹೋಗುವಾಗ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲು ವ್ಯವಸ್ಥೆ ಜಿಲ್ಲಾಡಳಿತ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಸರ್ಕಾರ ಎನ್ಜಿಒಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿ ಸ್ವಯಂಸೇವಕರನ್ನು ಸಿದ್ಧಪಡಿಸಲಿ. ಶೀಘ್ರದಲ್ಲಿ ವೈರಸ್ ನಿಗ್ರಹಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಎನ್ಜಿಒಗಳ ಮೂಲಕ ಜಾಗೃತಿ ಮೂಡಿಸುವುದು ತುರ್ತಾಗಿ ನಡೆಯಬೇಕು. ಹೀಗಾಗಿ, ಆನ್ಲೈನ್ ಅರ್ಜಿ ಮೂಲಕ ಕೋವಿಡ್ ವಾರಿಯರ್ಗಳಾಗಿ ಎನ್ಜಿಒಗಳ ನೇಮಕವಾಗಲಿ ಎಂದು ಯು.ಟಿ.ಖಾದರ್ ಹೇಳಿದರು.