ಮಂಗಳೂರು: ಕೇಂದ್ರ ಸರ್ಕಾರ ಮಂಗಳೂರಿನಲ್ಲಿ ಸ್ಥಾಪಿಸಲು ಹೊರಟಿದ್ದ ಆರ್ಎಎಫ್ ಬೆಟಾಲಿಯನ್ ಶಿವಮೊಗ್ಗಕ್ಕೆ ಸ್ಥಳಾಂತರ ಮಾಡಿರುವ ವಿಚಾರದಲ್ಲಿ ದ.ಕ.ಜಿಲ್ಲೆಯ ಸಂಸದರು, ಶಾಸಕರು ಮೌನ ವಹಿಸಿದ್ದೇಕೆ ಎಂದು ದ.ಕ.ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಪ್ರಶ್ನಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿಗೆ ಬಂದಿರುವ ಯೋಜನೆ ಶಿವಮೊಗ್ಗಕ್ಕೆ ಸ್ಥಳಾಂತರ ಆಗಿದ್ದು ಕಂಡಾಗ ಜಿಲ್ಲೆಯವರೇ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷರಿಗಿಂತ ಶಿವಮೊಗ್ಗ ಸಂಸದರು ಪ್ರಭಾವಶಾಲಿಗಳೇ ಎಂದು ಅವರು ಸ್ಪಷ್ಟನೆ ನೀಡಲಿ.
ಕೇಂದ್ರ ಸರ್ಕಾರ ಮಂಗಳೂರು ಸೇರಿದಂತೆ ದೇಶದ ಐದು ಕಡೆಗಳಲ್ಲಿ ಆರ್ಎಎಫ್ ಬೆಟಾಲಿಯನ್ ಸ್ಥಾಪಿಸಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ 2016ರಂದು ನಗರದ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಬಡಗ ಎಕ್ಕಾರಿನಲ್ಲಿ 48 ಎಕರೆ ಜಮೀನು ಕಾಯ್ದಿರಿಸಿತ್ತು. ಅದೇ ವರ್ಷ ಜೂನ್ ನಲ್ಲಿ ಆರ್ಎಎಫ್ನ ಅಂದಿನ ಐಜಿ ವಿಷ್ಣುವರ್ಧನ್ ಸೇರಿದಂತೆ 5 ಡಿಐಜಿಗಳು ಬಂದುಸ್ಥಳ ಪರಿಶೀಲನೆಯನ್ನು ಮಾಡಿದ್ದರು.
ಕೋಮುಸೂಕ್ಷ್ಮ ಪ್ರದೇಶ, ಎಂಆರ್ ಪಿಎಲ್, ಎಂಸಿಎಫ್ ಅಂತಹ ವಾಣಿಜ್ಯ ಕಾರ್ಖಾನೆ ಇರುವಂತಹ, ಉಗ್ರರು ಕಣ್ಣಿಟ್ಟಿರುವಂತಹ ಮಂಗಳೂರು ನಗರಕ್ಕೆ ಇಂತಹ ಒಂದು ಆರ್ಎಎಫ್ ಬೆಟಾಲಿಯನ್ ಅಗತ್ಯವಿತ್ತು. ಇದೀಗ ಇಲ್ಲಿ ಸ್ಥಾಪಿಸಬೇಕಿದ್ದ ಈ ಬೆಟಾಲಿಯನ್ ಅನ್ನು ಏಕಾಏಕಿ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಇಷ್ಟು ದೊಡ್ಡ ಯೋಜನೆ ಮಂಗಳೂರು ಕೈತಪ್ಪಿ ಶಿವಮೊಗ್ಗ ಪಾಲಾಗಿರುವಾಗ ದ.ಕ.ಜಿಲ್ಲೆಯ ಸಂಸದರು, ಶಾಸಕರು ಏಕೆ ಮೌನ ವಹಿಸಿದ್ದಾರೆ. ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಮಂಗಳೂರಿಗೆ ಅನ್ಯಾಯ ಮಾಡುತ್ತಿದೆ. ಆರ್ಎಎಫ್ ಬೆಟಾಲಿಯನ್ ಶಿವಮೊಗ್ಗಕ್ಕೆ ಹೋಗುವಾಗ ಜಿಲ್ಲೆಯ ಸಂಸದರು, ಶಾಸಕರು ಯಾಕೆ ತಡೆಯಲಿಲ್ಲ. ಹಾಗಾದರೆ ಮಂಗಳೂರಿನ ಜನರು ಬಿಜೆಪಿಗೆ ಮತ ಹಾಕಲು ಮಾತ್ರ ಬೇಕಾಗಿದ್ದಾರೆಯೇ ಉತ್ತರ ನೀಡಲಿ ಎಂದು ಮಿಥುನ್ ರೈ ಆಗ್ರಹಿಸಿದರು.