ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಿಂದ ಕೈಗೊಳ್ಳಲಾದ ಕಾಮಗಾರಿಗಳಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಆದೇಶ ನೀಡಿದರು.
ನಗರದಾದ್ಯಂತ 60 ಸಾವಿರ ಎಲ್ಇಡಿ ಲೈಟ್ ಅಳವಡಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಅದಕ್ಕೆ ನಾನೇ ಬಂದು ಚಾಲನೆ ನೀಡಲಿದ್ದೇನೆ. ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 37 ಐಸಿಯು ಕೊಠಡಿಗಳ ನಿರ್ಮಾಣಕ್ಕೆ ₹ 3.40 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಹಣ ಒದಗಿಸಲಾಗುತ್ತದೆ ಎಂದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಮಂಗಳೂರು ನಗರದ ಅಭಿವೃದ್ಧಿಯ ಕುರಿತು ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ತುಂಬೆ ಡ್ಯಾಂಗೆ ತಡೆಗೋಡೆ ಹಾಗೂ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕೆಂದು ಅಲ್ಲಿನ ಶಾಸಕರು, ಜನಪ್ರತಿನಿಧಿಗಳು ತಿಳಿಸಿದ್ದರು. ಅದಕ್ಕೆ ₹15 ಕೋಟಿ ವೆಚ್ಚ ತಗುಲಲಿದೆ. ಅದನ್ನು ಕೂಡ ಸ್ಮಾರ್ಟ್ ಸಿಟಿ ಮೂಲಕವೇ ನಿರ್ಮಾಣ ಮಾಡುವ ಯೋಜನೆ ಕೈಗೊಳ್ಳಲಾಗಿದೆ ಎಂದರು.
ಪಚ್ಚನಾಡಿ ತ್ಯಾಜ್ಯ ಕುಸಿತದಿಂದ ಬಹಳಷ್ಟು ಜನರ ಆಸ್ತಿಪಾಸ್ತಿ ನಷ್ಟವಾಗಿತ್ತು. ಈಗಾಗಲೇ ₹1.91 ಕೋಟಿ ಪರಿಹಾರ ಈಗಾಗಲೇ ನೀಡಲಾಗಿದೆ. ನಾಲ್ಕು ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಬೇಕಿದೆ. ಸಭೆಯಲ್ಲಿ ನಿರ್ಣಯ ಕೈಗೊಂಡ ನಿಟ್ಟಿನಂತೆ ಅವರ ಹಾನಿಯಾಗಿರುವ ಆಸ್ತಿಗಳ ವಿವರಗಳನ್ನು ಪರಿಶೀಲನೆ ನಡೆಸಿ ವಾರದೊಳಗೆ ಅವರ ಖಾತೆಗೆ ಪರಿಹಾರದ ಮೊತ್ತ ಹಾಕುವಂತೆ ಸೂಚಿಸಿದ್ದೇನೆ ಎಂದರು.
ಮಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 17ಎಕರೆ, 13 ಎಕರೆ ಹಾಗೂ 46 ಎಕರೆ ಜಮೀನುಗಳನ್ನು ಆದಷ್ಟು ಶೀಘ್ರ ಸೈಟ್ಗಳನ್ನಾಗಿ ಪರಿವರ್ತಿಸಿ ಸಾರ್ವಜನಿಕರಿಗೆ ಒದಗಿಸಲು ತಿಳಿಸಿದ್ದೇನೆ. ಅದರಲ್ಲಿ ಪತ್ರಕರ್ತರಿಗೆ ನೀಡಲಾಗುವ ಬಡಾವಣೆಗೆ ಶೇ.5ರ ರಿಯಾಯಿತಿ ನೀಡಬೇಕೆಂದು ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.