ಮಂಗಳೂರು: ರಾಜ್ಯದಲ್ಲಿ ಹಿಂದೂಗಳನ್ನು ಬಲವಂತವಾಗಿ ಆಮಿಷವೊಡ್ಡಿ ಹಾಗೂ ಯುವತಿಯರನ್ನು ಮೋಸದ ಪ್ರೇಮ ಜಾಲದಲ್ಲಿ ಸಿಲುಕಿಸಿ ಮತಾಂತರ ಮಾಡಲಾಗುತ್ತಿದೆ ಎಂದು ಮಂಗಳೂರಿನ ಮಠಾಧೀಶರು ಆರೋಪಿಸಿದ್ದಾರೆ.
ಮತಾಂತರ ನಿಷೇಧ ಕಾನೂನು ಜಾರಿಗೊಳಿಸುವುದರೊಂದಿಗೆ ತುರ್ತಾಗಿ ಅಧ್ಯಾದೇಶವನ್ನು ನೀಡಬೇಕೆಂದು ಒಡಿಯೂರು ದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಓಂಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಒಕ್ಕೊರಲಿನಿಂದ ಧ್ವನಿಯೆತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ಕುರಿತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಒಡಿಯೂರು ದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಅಲ್ಪಸಂಖ್ಯಾತರು ಬಹುಸಂಖ್ಯಾತ ಹಿಂದೂಗಳನ್ನು ಬಡತನ ನಿವಾರಣೆ, ಶಿಕ್ಷಣ ಕೊಡಿಸುವುದು, ಉದ್ಯೋಗ ಕೊಡಿಸುವುದು, ಮೋಸದ ಪ್ರೇಮದ ಜಾಲಕ್ಕೆ ಕೆಡವಿ ಮದುವೆಯ ಆಮಿಷವೊಡ್ಡಿ ಮತಾಂತರ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಐಟಿ-ಬಿಟಿ ಕಂಪನಿಗಳಲ್ಲೂ ಮತಾಂತರ ಜಾಲ ಸಕ್ರಿಯವಾಗಿದ್ದು, ಪ್ರೊಮೊಷನ್ ಆಗಬೇಕಾದರೆ ಮತಾಂತರ ಆಗಬೇಕೆನ್ನುವ ಆಮಿಷಗಳನ್ನೊಡ್ಡಲಾಗುತ್ತಿದೆ. ಆದ್ದರಿಂದ ಹಿಂದೂಗಳ ಮತಾಂತರದ ವಿರುದ್ಧ ರಾಜ್ಯ ಸರ್ಕಾರ ಶೀಘ್ರವಾಗಿ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಬೇಕು. ಕಠಿಣ ಕಾನೂನಿಂದ ಮಾತ್ರ ಮತಾಂತರ ನಿರ್ಮೂಲನೆ ಸಾಧ್ಯ ಎಂದು ಹೇಳಿದರು.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಮತಾಂತರ ಪಿಡುಗು ಬಹಳ ವೇಗವಾಗಿ ಎಲ್ಲೆಡೆ ಹಬ್ಬುತ್ತಿದ್ದು, ಹಿಂದೆ ಬಡತನವನ್ನು ಗುರಿಯಾಗಿರಿಸಿಕೊಂಡು ಮತಾಂತರ ನಡೆಯುತ್ತಿತ್ತು. ಈಗ ಅದು ಐಟಿ-ಬಿಟಿಗೂ ಕಾಲಿಟ್ಟು ವಿದ್ಯಾವಂತರನ್ನೂ ತಮ್ಮ ತೆಕ್ಕೆಗೆ ಎಳೆದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಮತಾಂತರದ ಒಂದು ಜಾಲವೇ ಸಕ್ರಿಯವಾಗಿದ್ದು, ಇದನ್ನು ಹತ್ತಿಕ್ಕಲು ನಮಗೆ ಕಾನೂನಿನ ಅವಶ್ಯಕತೆ ಇದೆ. ಈ ಬಗ್ಗೆ ಸಿಎಂ ಹಾಗೂ ರಾಜ್ಯಪಾಲರಿಗೂ ಮನವಿ ಮಾಡಲಿದ್ದೇವೆ. ಆದ್ದರಿಂದ ಮತಾಂತರ ನಿಷೇಧ ಕಾನೂನನ್ನು ಸರ್ಕಾರ ಜಾರಿಗೊಳಿಸುವುದರೊಂದಿಗೆ ತುರ್ತಾಗಿ ಆಧ್ಯಾದೇಶವನ್ನು ಜಾರಿಗೊಳಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.
ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಮತಾಂತರ ಮಾಡುತ್ತಿರುವುದನ್ನು ಖಂಡಿಸುವುದು ಮಾತ್ರವಲ್ಲದೆ ಮುಂದೆ ಈ ರೀತಿಯ ಪ್ರಕ್ರಿಯೆಗಳು ನಡೆಯದಂತೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.
ಓಂಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಮತಾಂತರ ವೈರಸ್ ರೀತಿಯಲ್ಲಿ ಹರಡುತ್ತಿದ್ದು, ಭಾರತದಲ್ಲಿ ಬಹುಸಂಖ್ಯಾತರಿರುವ ಹಿಂದೂ ಧರ್ಮವನ್ನು ಸಂಪೂರ್ಣ ನಾಶಗೊಳಿಸುವ ಸಂಚು ಭಾರಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗುತ್ತಿದೆ. ನಾವು ಯಾವತ್ತೂ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳನ್ನು ಗೌರವಿಸುತ್ತೇವೆ. ಆದರೆ ಹಿಂದೂ ಧರ್ಮೀಯರನ್ನು ಮತಾಂತರ ಮಾಡಿದ್ದಲ್ಲಿ ಮಾತ್ರ ಸುಮ್ಮನಿರೋದಿಲ್ಲ. ಆದ್ದರಿಂದ ಇದನ್ನು ತಡೆಗಟ್ಟಲು ಆಮರಣಾಂತರ ಉಪವಾಸ ಮಾಡಿ ಪ್ರಾಣಾರ್ಪಣೆ ಮಾಡಲು ನಾವು ಸಿದ್ಧ ಎಂದು ಹೇಳಿದರು.