ಮಂಗಳೂರು : ನಗರದ ಬಂಗ್ರ ಕೂಳೂರು ಹಾಗೂ ಕೋಡಿಕಲ್ ಪ್ರದೇಶದ ನಾಗಬನಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೇ ಅಲ್ಲಿನ ನಾಗರ ಕಲ್ಲು ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಾವೂರು ಶಾಂತಿ ನಗರ ನಿವಾಸಿಗಳಾದ ಸಫ್ವಾನ್(25), ಮೊಹಮ್ಮದ್ ಸುಹೈಬ್(23), ನಿಖಿಲೇಶ್(22), ಪಂಜಿಮೊಗರು ನಿವಾಸಿ ಪ್ರವೀಣ್ ಅನಿಲ್ ಮೊಂತೆರೊ(27), ಸುರತ್ಕಲ್ ನಿವಾಸಿ ಜಯಂತ್ ಕುಮಾರ್(30), ಬಂಟ್ವಾಳ ತಾಲೂಕಿನ ಪಡೂರು ಗ್ರಾಮದ ಪ್ರತೀಕ್(24), ಕೂಳೂರು ಪಡುಕೋಡಿ ಗ್ರಾಮದ ಮಂಜುನಾಥ(30) ಹಾಗೂ ಹಾಸನ ಜಿಲ್ಲೆ ಬೇಳೂರು ಗ್ರಾಮ ಮೂಲದ ನೌಷಾದ್ ಅರೇಹಳ್ಳಿ( 30) ಬಂಧಿತ ಆರೋಪಿಗಳು.
ಆರೋಪಿಗಳು ಕೋಮುಗಲಭೆ ಸೃಷ್ಟಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರದಿಂದ ನಾಗರಕಲ್ಲನ್ನು ಧ್ವಂಸಗೈದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಅನಿಲ್ ಮೊಂತೆರೋ 10 ಸಾವಿರ ರೂ. ಆಮಿಷವೊಡ್ಡಿ ಈ ವಿಧ್ವಂಸಕ ಕೃತ್ಯ ಎಸಗಲು ಸಫ್ವಾನ್ ಎಂಬ ಆರೋಪಿಯೊಂದಿಗೆ ಚರ್ಚಿಸಿದ್ದಾನೆ. ಆ ಬಳಿಕ ಎಲ್ಲರೂ ಸೇರಿ ರಾತ್ರಿ ವೇಳೆ ಕೃತ್ಯ ಎಸಗಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾಹಿತಿ ನೀಡಿದ್ಧಾರೆ.
ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿರುವ ಪೊಲೀಸ್ ತಂಡಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. 25 ಸಾವಿರ ರೂ. ಬಹುಮಾನ ನೀಡಿ ಅಭಿನಂದಿಸಿದರು.
ಇದನ್ನೂ ಓದಿ: ನಕಲಿ ಡೆಪ್ಯೂಟಿ ಕಮಿಷರ್ ವೇಷದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಕೋಟಿಗಟ್ಟಲೇ ವಂಚಿಸಿದವ ಅಂದರ್