ಮಂಗಳೂರು: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದೆ.
ಜಯರಾಜ್ ಕೊಲೆಯಾದ ದುರ್ದೈವಿ. ಮೂಡುಬಿದಿರೆ ತಾಲೂಕಿನ ಕುಕ್ಕುದಕಟ್ಟೆ ಮೂಡುಕೊಣಾಜೆ ಗ್ರಾಮದ ಅಶ್ವಿನಿ ಯಾನೆ ಮಮತಾ ಹಾಗೂ ಅದೇ ಗ್ರಾಮದ ಆನಂದ ಮೇರ ಶಿಕ್ಷೆಗೊಳಗಾದವರು.
ಪ್ರಕರಣ ವಿವರ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೊಗರು ನಿವಾಸಿ ಜಯರಾಜ್ ಮಂಗಳೂರಿನಲ್ಲಿ ನೌಕರಿ ಮಾಡಿಕೊಂಡಿದ್ದರು. 2014ರಲ್ಲಿ ಅಶ್ವಿನಿಯನ್ನು ವಿವಾಹವಾಗಿದ್ದ ಜಯರಾಜ್, ಮೂಡುಬಿದಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 2015 ರಲ್ಲಿ ಅಶ್ವಿನಿ ಗರ್ಭವತಿಯಾಗಿ ತವರು ಮನೆಗೆ ಹೆರಿಗೆಗೆ ಹೋಗಿದ್ದರು. ಈ ಸಂದರ್ಭ ಅಶ್ವಿನಿ ಜೊತೆ ಅದೇ ಊರಿನ ಆನಂದ ಸಂಬಂಧವಿರಿಸಿಕೊಂಡಿದ್ದ. ಇದರಿಂದಾಗಿ ಜಯರಾಜ್ ಮತ್ತು ಅಶ್ವಿನಿ ನಡುವೆ ವೈಮನಸ್ಸು ಉಂಟಾಗಿತ್ತು.
ತಾಯಿ ಮನೆಯಲ್ಲಿದ್ದ ಅಶ್ವಿನಿ 2016ರ ಸೆಪ್ಟಂಬರ್ 13 ರಂದು ಪತಿ ಜಯರಾಜ್ಗೆ ಹಣ ನೀಡುವುದಾಗಿ ನಂಬಿಸಿ, ಆತನನ್ನು ಮನೆಗೆ ಕರೆಸಿಕೊಂಡಿದ್ದಳು. ಜಯರಾಜ್ ಅಂದು ಬೆಳಗ್ಗೆ 11:30ರ ವೇಳೆಗೆ ಮನೆಗೆ ಆಗಮಿಸಿದ್ದು, ಆಗ ಅಲ್ಲಿಯೇ ಇದ್ದ ಆನಂದ, ಕಬ್ಬಿಣದ ರಾಡ್‌ನಿಂದ ಜಯರಾಜ್ ತಲೆಗೆ ಹೊಡೆದು, ಹಲ್ಲೆ ಮಾಡಿ, ಅಶ್ವಿನಿ ಜತೆ ಸೇರಿ ಕೊಲೆ ಮಾಡಿದ್ದ. ಬಳಿಕ ಜಯರಾಜ್‌ನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಮನೆಯ ಹಿಂಬದಿಯಲ್ಲಿರುವ ಶಾಲೆಯ ಕಂಪೌಂಡ್ ಬಳಿ ಅಡಗಿಸಿಟ್ಟಿದ್ದರು. ನಂತರ ಜಯರಾಜ್‌ನ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಇತ್ಯಾದಿ ವಸ್ತುಗಳನ್ನು ತೆಗೆದಿಟ್ಟುಕೊಂಡು ಮೃತದೇಹವನ್ನು ಪಾಳುಬಾವಿಗೆ ಹಾಕಿದ್ದರು. ಮೃತದೇಹ ಕೊಳೆತಾಗ ವಾಸನೆ ಬಾರದ ಹಾಗೆ ರಾಸಾಯನಿಕ ವಸ್ತುವನ್ನು ಹಾಕಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಇನ್ನು ಕೊಲೆ ಮರೆಮಾಚುವ ಉದ್ದೇಶದಿಂದ ಹಾಗೂ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಅಶ್ವಿನಿ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಸೆ.16 ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅಲ್ಲದೆ ಕೊಲೆ ನಡೆಸಿದ ಬಳಿಕ ಆರೋಪಿ ಆನಂದ, ಜಯರಾಜ್‌ನನ್ನು ಅಪಹರಿಸಿರುವುದಾಗಿ ನಾಟಕ ಮಾಡಿದ್ದಾನೆ. ಇದಕ್ಕೆ ಶ್ರೀಪತಿ ಮತ್ತು ಧನಪತಿ ಎಂಬುವರು ಸಹ ಸಹಕರಿಸಿದ್ದಾರೆ. ಜಯರಾಜ್‌ನ ಮೊಬೈಲ್‌ನ ಸಿಮ್ ಬಳಸಿ, ಜಯರಾಜ್ ತಾಯಿಗೆ ಕರೆ ಮಾಡಿದ್ದ ಆರೋಪಿಗಳು, ‘ಜಯರಾಜ್ ನಮಗೆ 62,000 ರೂ. ನೀಡಬೇಕಿತ್ತು. ಅದಕ್ಕಾಗಿ ಅವನನ್ನು ಕರೆದುಕೊಂಡು ಬಂದಿದ್ದೇವೆ. ಆತನಿಂದ ಬರಬೇಕಾದ ಹಣ ಬರುವವರೆಗೂ ಆತನನ್ನು ನಮ್ಮ ಜೊತೆ ದುಡಿಸಿಕೊಂಡು ಹಣ ವಸೂಲು ಮಾಡಿ ಬಳಿಕ ಕಳುಹಿಸುತ್ತೇವೆ’ ಎಂದು ಹೇಳಿದ್ದಾರೆ.
ಆರೋಪಿಗಳು ಮಾಡಿದ ಪೋನ್ ಕರೆಯಿಂದ ಅನುಮಾನಗೊಂಡ ಜಯರಾಜ್ ಅಣ್ಣ ಗಿರೀಶ್ ಸೆ.22ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ತನ್ನ ತಮ್ಮನ ಅಪಹರಣದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಮೂಡುಬಿದಿರೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಒಟ್ಟು 36 ಮಂದಿ ಸಾಕ್ಷಿದಾರರನ್ನು ವಿಚಾರಿಸಿದ್ದರು. ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆನಂದ ಮೇರ ಮತ್ತು ಅಶ್ವಿನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5,000 ರೂ. ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ ಜೈಲು ಶಿಕ್ಷೆ, ಸಾಕ್ಷಿನಾಶ ಪ್ರಕರಣಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು. 10,000 ರೂ. ಅನ್ನು ಜಯರಾಜ್ ಅವರ ತಾಯಿಗೆ ನೀಡುವಂತೆ ಹಾಗೂ ಜಯರಾಜ್ ಅವರ ಮಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದರು.