ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ಹಂಪನಕಟ್ಟೆ ಮಂಗಳೂರು ವಿ ವಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿನಿ ವರ್ಗಾವಣಾ ಪತ್ರ (ಟಿಸಿ)ವನ್ನು ಪಡೆದುಕೊಂಡಿದ್ದಾಳೆ. ಕಾಲೇಜಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸುವುದನ್ನು ನಿಷೇಧಿಸಿ ಮಂಗಳೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಬಳಿಕ ವಿವಾದ ಆರಂಭವಾಗಿತ್ತು. 15 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದರು.
ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ಸೇರುವುದಿದ್ದರೆ ಟಿ ಸಿ ವ್ಯವಸ್ಥೆ ಮಾಡುವುದಾಗಿ ಮಂಗಳೂರು ವಿ ವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಲು ಅನುಮತಿ ಸಿಗದ ಕಾರಣ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಟಿ ಸಿ ಪಡೆದುಕೊಳ್ಳಲು ನಿರ್ಧರಿಸಿದ್ದರು.
ಇದೀಗ ಓರ್ವ ವಿದ್ಯಾರ್ಥಿನಿ ಟಿ ಸಿ ಪಡೆದುಕೊಂಡಿದ್ದಾರೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮಂಗಳೂರು ವಿ ವಿ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಅವರು, ಓರ್ವ ವಿದ್ಯಾರ್ಥಿನಿ ಟಿ ಸಿ ಪಡೆದುಕೊಂಡಿದ್ದು, ಇನ್ನೂ ಮೂವರು ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ಸೇರ್ಪಡೆಯಾಗಲು ಎನ್ಓಸಿ ( ನೋ ಅಬ್ಜೆಕ್ಷನ್ ಸರ್ಟಿಫಿಕೇಟ್) ಪಡೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯನಗರ ಪೊಲೀಸ್ ವರ್ಗಾವಣೆ ಪ್ರಕ್ರಿಯೆ ಬಹುತೇಕ ಪೂರ್ಣ